ಪಾಂಡವಪುರ: ಪಾಲಿಸಿದಾರರು ಮತ್ತು ಪ್ರತಿನಿಧಿಗಳ ಕಮಿಷನ್ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿರುವುದನ್ನು ಖಂಡಿಸಿ ಭಾರತೀಯ ಜೀವ ವಿಮಾ ಒಕ್ಕೂಟದ ಪ್ರತಿನಿಧಿಗಳು ಕಪ್ಪು ಪಟ್ಟಿ ಧರಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಆನಂದ್ ಕಾಂಪ್ಲೆಕ್ಸ್‌ನಲ್ಲಿರುವ ಭಾರತೀಯ ಜೀವ ವಿಮೆ ಕಚೇರಿ ಎದುರು ಜಮಾವಣೆಗೊಂಡ ಒಕ್ಕೂಟದ ಪ್ರತಿನಿಧಿಗಳು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಪಾಲಿಸಿದಾರರ ಬೋನಸ್ ಹೆಚ್ಚಿಸಿ, ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡಬೇಕು. ಸಾಲ ಮತ್ತು ಪ್ರೀಮಿಯಂ ವಿಳಂಬದ ಶುಲ್ಕದ ಬಡ್ಡಿ ದರ ಕಡಿಮೆ ಮಾಡಬೇಕು. ಪಾಲಿಸಿ ಕಂತುಗಳು ಹಾಗೂ ಕಮಿಷನ್ ಮೇಲಿನ ಜಿಎಸ್‌ಟಿಯನ್ನು ತೆಗೆದು ಹಾಕಬೇಕು. ಪ್ರತಿನಿಧಿಗಳ ಕಲ್ಯಾಣ ನಿಧಿಯನ್ನು ರಚಿಸಬೇಕು. ಗ್ರಾೃಚುಟಿ ಹೆಚ್ಚಿಸಬೇಕು. ಗ್ರೂಪ್ ಮೆಡಿಕ್ಲೈಮ್ ನೀಡಬೇಕು. ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ವಿಮಾ ಪ್ರತಿನಿಧಿಯನ್ನು ವೃತ್ತಿಪರರು ಎಂದು ಗುರುತಿಸಬೇಕು. ವಹಿವಾಟು ಶುಲ್ಕವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಒಕ್ಕೂಟದ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಂ.ಮಂಜು ಮಾತನಾಡಿ, ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಸೆ.30ರಂದು ಮೈಸೂರಿನ ವಿಭಾಗೀಯ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಅ.30ರಂದು ಮೆಗಾ ಧರಣಿ ಹಾಗೂ ಜೋನಲ್ ಕಚೇರಿ ಚಲೋ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಒಕ್ಕೂಟದ ತಾಲೂಕು ಅಧ್ಯಕ್ಷ ಪಿ.ಎಂ.ಗಂಗಾಧರ್, ಗೌರವಾಧ್ಯಕ್ಷ ಕೆ.ಪುಟ್ಟೇಗೌಡ, ಕಾರ್ಯದರ್ಶಿ ಬಿ.ಎಂ.ಮಂಜು, ಖಜಾಂಚಿ ಮಧು, ಮಹದೇಶ್ವರಪುರ ದೇವರಾಜು, ಶ್ರೀನಿವಾಸ್, ಪಾಪೇಗೌಡ, ಸ್ವಾಮಿಗೌಡ, ಸಿ.ಕೆ.ಸುರೇಶ್, ನಟರಾಜು, ಬೇವಿನಕುಪ್ಪೆ ಭಾರತಿ, ಕನಗನಮರಡಿ ರವಿ, ನಾರಾಯಣ್, ಗವೀಗೌಡ, ಶಿವಕುಮಾರ್ ಇತರರು ಇದ್ದರು.