ಜಿಲ್ಲೆ

ಜೀವ ತುಂಬ ಕೆಲಸವೇ ಗೊಂಬೆ ಆಟ

ಬಳ್ಳಾರಿ : ಗೊಂಬೆಗಳಿಗೆ ಜೀವ ತುಂಬುವ ಕೆಲಸವೇ ಸೂತ್ರದ ಗೊಂಬೆ ಆಟ ಎಂದು ಸೈಬರ್ ಠಾಣೆಯ ಡಿವೈಎಸ್ಪಿ ಸಂತೋಷ್ ಚೌಹನ್ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಹಾಗೂ ಟಿ. ಎಚ್. ಎಂ. ಸಾಂಸ್ಕ್ರತಿಕ ಕಲಾ ಟ್ರಸ್ಟ್ ಸಹಯೋಗದೊಂದಿಗೆ ಭಾನುವಾರ ನಡೆದ ಸಾಂಸ್ಕ್ರತಿಕ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೊಂದು ವಿನೂತನ ಕಲೆ ಪ್ರತಿಯೊಂದು ಪಾತ್ರಕ್ಕೆ ಮಾತುಗಳನ್ನು ಜೋಡಿಸಿ ಗೊಂಬೆಗಳನ್ನು ಆಡಿಸಿ ಪೌರಾಣಿಕ ಕಥಾ ಪ್ರಸಂಗಗಳನ್ನು ಪ್ರದರ್ಶಿಸುವುದು ಹೆಮ್ಮೆಯ ವಿಷಯ ಎಂದರು.
ವಿಎಸ್ ಕೆ ವಿವಿ ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಕಲಾವಿದರು ಕಳೆದ ಹಲವಾರು ದಶಕಗಳಿಂದ ಗೊಂಬೆಗಳಿಗೆ ಜೀವ ತುಂಬುತ್ತಿರುವುದು ಜಿಲ್ಲೆಗೆ ಒಂದು ಕೀರ್ತಿಯ ವಿಷಯವಾಗಿದೆ. ಟಿ.ಎಚ್. ಎಂ ಕಲಾ ಟ್ರಸ್ಟ್ ನವರು ಇಂಥ ಕಲಾವಿದರನ್ನು ಕರೆಸಿ ಪ್ರೋತ್ಸಾಹಿಸುವುದು ಸಂತಸದ ವಿಷಯವಾಗಿದೆ.
ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿ ರಾವ್, ಐಜಿಪಿ ಕಚೇರಿ ಆಡಳಿತಾಧಿಕಾರಿ ಎಚ್.ಎಂ. ಪಂಪಾಪತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೂಪುರ ಲಲಿತಕಲಾ ಟ್ರಸ್ಟ್ ಅಧ್ಯಕ್ಷೆ ಡಾ. ವೀಣಾ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ಮತ್ತು ಪ್ರಕೃತಿ ಕಲಾ ಟ್ರಸ್ಟ್ ಅಧ್ಯಕ್ಷೆ ರೇಣುಕಾ ಅಭಿಲಾಷ್ ಮತ್ತು ತಂಡದವರಿಂದ ಸುಗಮ ಸಂಗೀತ ಹಾಗೂ ಮಾರುತಿ ಯಕ್ಷಗಾನ ಸೂತ್ರದ ಗೊಂಬೆ ಮತ್ತು ದೊಡ್ಡಾಟ ಮಂಡಳಿಯಿಂದ ಕರ್ಣ ಪರ್ವ ಎಂಬ ಪೌರಾಣಿಕ ಕಥಾ ಪ್ರಸಂಗ ಸೂತ್ರದ ಗೊಂಬೆ ಆಟ ನಡೆಯಿತು.
ಬಳಿಕ ನಾಟಕ ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದರಿಗೆಲ್ಲ ಅಭಿನಂದನಾ ಪತ್ರ ವಿತರಿಸಲಾಯಿತು.