ಜಿಲ್ಲೆ

ಜೀವ, ಜಡಗಳಲ್ಲೂ ವ್ಯಾಪಿಸಿದ ಜಗದೀಶ್ವರ

ಶಿರಸಿ: ವ್ಯವಧಾನದ ಪರಿಚಯ ಇಲ್ಲದಿದ್ದರೆ ಶಂಕರ ಭಗವತ್ಪಾದರ ತತ್ವಗಳು ಅರಿವಿಗೆ ಬರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪೂಜೆ, ಪುನಸ್ಕಾರಗಳಲ್ಲಿ ಏಕಾಗ್ರತೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಶಂಕರ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿನ ಯೋಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ‘ಭಗವತ್ಪಾದರ ಭಾಷ್ಯ ಗ್ರಂಥಗಳು ಬುದ್ಧಿಮತ್ತೆಯ ಪರಾಕಾಷ್ಠೆಯಾದರೆ, ಸ್ತೋತ್ರ ಗ್ರಂಥಗಳು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿ. ಪರಿಪೂರ್ಣ ಜ್ಞಾನಿಯಾಗಿರುವ ಕಾರಣ ಇವೆರಡೂ ಶಂಕರರಿಗೆ ಸಾಧ್ಯವಾಗಿದೆ. ಅವರ ತತ್ವಗಳು ಅರಿವಿಗೆ ಬರಲು ಏಕಾಗ್ರತೆಯ ಅಗತ್ಯವಿದೆ. ಪರಿಪೂರ್ಣ ಏಕಾಗ್ರತೆಯಿದ್ದರೆ ಮಾತ್ರ ಭಗವತ್ಪಾದರ ತತ್ವ ತಿಳಿಯಲು, ಅನುಸರಿಸಲು ಸಾಧ್ಯವಿದೆ’ ಎಂದರು.
ಎಲ್ಲ ಜೀವ, ಜಡಗಳಲ್ಲೂ ಜಗದೀಶ್ವರ ವ್ಯಾಪಿಸಿದ್ದಾನೆ ಎಂಬ ತತ್ವ ನೀಡಿ ವಿವಿಧತೆಯಲ್ಲಿ ಏಕತೆಗೆ ರ್ತಾಕ ರೂಪ ಕೊಟ್ಟವರು ಭಗವತ್ಪಾದರಾಗಿದ್ದಾರೆ. ಉಪನಿಷತ್, ಭಗವದ್ಗೀತೆ ಆಧಾರದ ಮೇಲೆ ಅದನ್ನು ರೂಪಿಸಿದವರು ಅವರಾಗಿದ್ದಾರೆ ಎಂದ ಶ್ರೀಗಳು, ಪ್ರತಿಯೊಬ್ಬರೂ ಶಂಕರ ತತ್ವ ಅಳವಡಿಸಿಕೊಂಡು ಮುಕ್ತಿಯೆಡೆ ಸಾಗಬೇಕು ಎಂದರು.
ಮೈಸೂರಿನ ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಮಾತನಾಡಿ, ಶಂಕರರು ನೀಡಿದ ದರ್ಶನಗಳನ್ನು ಮುನರಪಿ ಮನನ ಮಾಡಿ ಅದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕತೆಯತ್ತ ಸಾಗಬೇಕು ಎಂದರು. ಅಮಿಥ್ಯವನ್ನು ದೂರ ಮಾಡಲು ಜ್ಞಾನವೇ ಮಾರ್ಗವಾಗಿದೆ. ಅಂಥ ಜ್ಞಾನವನ್ನು ಬೆಳೆಸಿಕೊಂಡು ಮಾನವ ಸಂಕುಲದ ಒಳಿತು ಮಾಡಬೇಕು. ಸೇವೆಯ ಮೂಲಕ ಭಗವಂತನ ಪೂಜೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದ ಅವರು, ಧರ್ಮದ, ಅಧ್ಯಾತ್ಮದ ಸಾರ್ವತ್ರೀಕರಣ ಆಗಬೇಕು. ಶಾಶ್ವತವಾದ ಸತ್ಯವನ್ನೇ ಅನುಸರಿಸುವ, ಭಗವಂತನ ಪ್ರೀತಿಗೆ ಪಾತ್ರವಾಗುವ ಕಾರ್ಯದಲ್ಲೇ ತೊಡಗಬೇಕು. ಸತ್ಯಾನ್ವೇಷಣೆ ಹೇಗೆ ಮಾಡಬೇಕೆಂದು ಶಂಕರರು ತಮ್ಮ ಭಾಷ್ಯ, ಸ್ತೋತ್ರಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಅದನ್ನು ಇನ್ನಷ್ಟು ಸರಳೀಕರಿಸಿ ಜನರಿಗೆ ನೀಡುವ ಕಾರ್ಯ ಆಗಬೇಕು. ಈ ಮೂಲಕ ಅಜ್ಞಾನದಲ್ಲಿರುವ ನಮ್ಮವರೆಲ್ಲರನ್ನೂ ಮೇಲೆತ್ತುವ ಕೆಲಸ ಮಾಡಬೇಕು ಎಂದರು.
ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿವೃತ್ತ ಸಂಶೋಧಕ ಡಾ.ಟಿ.ವಿ. ಸತ್ಯನಾರಾಯಣ ಅವರು ಆನ್​ಲೈನ್ ಮೂಲಕ ವಿಶೇಷ ಉಪನ್ಯಾಸ ನೀಡಿ, ಇಡೀ ಜಗತ್ತಿನ ಮಹಾನ್ ಚಿಂತಕರೆಲ್ಲ ಶಂಕರ ಭಗವತ್ಪಾದರನ್ನು ವಿಶ್ವದ ಶ್ರೇಷ್ಠ ದಾರ್ಶನಿಕ ಎಂಬುದನ್ನು ಒಪ್ಪುತ್ತಾರೆ. ಜೀವ ಪ್ರಪಂಚವನ್ನೂ ಮೀರಿದ ಶಕ್ತಿಯಿದೆ ಎಂಬುದನ್ನು ಲೌಕಿಕದ ಜೀವಿಗಳಿಗೆ ತೋರಿರುವ ಅವರು, ಅದ್ವೈತ ತತ್ವ ಪ್ರತಿಪಾದಿಸುವ ಮೂಲಕ ಎಲ್ಲರಲ್ಲಿಯೂ ಭಗವಂತ ಅಂಶವಿದೆ ಎಂಬುದನ್ನು ತೋರಿಸಿದ್ದಾರೆ. ಶಂಕರರು ಬರೆದ ಗ್ರಂಥಗಳು, ಸ್ತೋತ್ರಗಳು ಜೀವನಕ್ಕೆ ದರ್ಶನ ನೀಡುತ್ತವೆ. ಎಲ್ಲವೂ ಪರಬ್ರಹ್ಮನಿಂದ ಆಗಿದೆ. ಆ ಅಗೋಚರ ಶಕ್ತಿಯಿಂದಲೇ ಪ್ರಕೃತಿ ಚಲನೆಯಲ್ಲಿದೆ ಎಂಬುದನ್ನು ತೋರಿದ್ದಾರೆ. ಮನಸ್ಸನ್ನು ನಿಯಂತ್ರಿಸಿದರೆ ದೇವರನ್ನು ಕಾಣಬಹುದು ಎಂಬುದನ್ನು ತಿಳಿಸಿದ್ದಾರೆ. ಅಹಂಕಾರ ಬಿಟ್ಟು ಜ್ಞಾನ ಬೆಳೆಸಿಕೊಳ್ಳಬೇಕು, ಸಂಸ್ಕಾರ ಬೆಳೆಸಿಕೊಂಡು ಭಗವಂತನ ನೋಡಬೇಕು ಎಂಬ ಅವರ ಮಾತನ್ನು ಇಂದು ಎಲ್ಲರೂ ಅನುಸರಿಸುವ ಅಗತ್ಯವಿದೆ ಎಂದರು.
ಇದೇ ವೇಳೆ ಸ್ವರ್ಣವಲ್ಲೀ ಶ್ರೀಗಳಿಂದ ಸನ್ಮಾನ ಸ್ವೀಕರಿಸಿದ ಕವಲಕ್ಕಿ ಸಂಸ್ಕೃತ ಕಾಲೇಜಿನ ನಿವೃತ್ತ ವ್ಯಾಕರಣ ಉಪನ್ಯಾಸಕ ಗಣಪತಿ ಭಟ್ಟ ಕವಲಕ್ಕಿ ಮಾತನಾಡಿ, ಶಂಕರ ಭಗವ್ಪಾದರು ಪವಾಡ ಪುರುಷರ ಜತೆಗೆ ಮಹಾ ತ್ಯಾಗಿಯೂ ಆಗಿದ್ದರು. ಜ್ಞಾನಿಗಳು ಎಲ್ಲರಿಗಿಂತ ದೊಡ್ಡವರು ಎಂದು ಪ್ರಪಂಚಕ್ಕೆ ತೋರಿಸಿದ್ದರು. ಸ್ತ್ರೀಯರ ಬಗ್ಗೆ ಅಪಾರ ಗೌರವವುಳ್ಳವರಾಗಿದ್ದ ಅವರು, ಸಂಸಾರದ ಹಿಡಿತದಿಂದ ಮುಕ್ತರಾಗಿದ್ದೂ, ಇಡೀ ಜಗತ್ತಿಗೆ ಮುಕ್ತಿಯ ಮಾರ್ಗ ಹಾಕಿಕೊಟ್ಟ ಶ್ರೇಷ್ಠ ಶಕ್ತಿಯಾಗಿದ್ದಾರೆ ಎಂದರು.

ಪ್ರಪಂಚದಲ್ಲಿ ಸಂತರು, ವಿರಕ್ತರು, ಮಠಾಧೀಶರ ಸಂಖ್ಯೆ ವಿರಳ. ಆದರೆ, ಗ್ರಹಸ್ಥರ ಸಂಖ್ಯೆ ಸಾಕಷ್ಟಿದೆ. ಹೀಗಾಗಿ ಗ್ರಹಸ್ತ್ಯಲ್ಲಿ ಅಧ್ಯಾತ್ಮ ಒಡಮೂಡಿಸುವ ಶಿಕ್ಷಣ ನೀಡಬೇಕು. ಸಂಸಾರದಲ್ಲಿ ಅಧ್ಯಾತ್ಮೀಕರಣದ ಜ್ಞಾನ ಪ್ರಸಾರ ಆಗಬೇಕು. ಆ ಮೂಲಕ ಜ್ಞಾನ ಪ್ರಸಾರದ ವ್ಯವಸ್ಥೆ ವಿಸ್ತರಿಸಬೇಕು.| ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಮೈಸೂರಿನ ರಾಮಕೃಷ್ಣಾಶ್ರಮ