ವಿಜಯವಾಣಿ ಸುದ್ದಿಜಾಲ ಧಾರವಾಡ
ಯಾವುದೇ ಸಮಯದಲ್ಲಿ ತೊಂದರೆಯಲ್ಲಿ ಸಿಲುಕಿದ ವ್ಯಕ್ತಿಗಳಿಗೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಿದರೆ, ಅದು ಜೀವ ಉಳಿಸಲು ಪರಿಣಾಮಕಾರಿಯಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಚೇರ್ಮನ್ ಮಹಾಂತೇಶ ವೀರಾಪುರ ಹೇಳಿದರು.
ನಗರದ ಜಿಲ್ಲಾ ಗೃಹರಕ್ಷಕ ಸಿಬ್ಬಂದಿಗೆ ಭಾರತೀಯ ರೆಡ್ ಕ್ರಾಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಹೊಂದಿದ್ದರೆ, ನೀಡುವ ಪ್ರಥಮ ಚಿಕಿತ್ಸೆ ಫಲಪ್ರದವಾಗುತ್ತದೆ. ಅಪಘಾತದಲ್ಲಿ ಜೀವ ಉಳಿಸಿದರೆ ಆತ್ಮ ಸಂತೃಪ್ತಿ ದೊರೆಯುತ್ತದೆ. ಜೀವನ ಇದ್ದರೆ ಮಾತ್ರ ಬದುಕು. ಸುರಕ್ಷಿತ ಬದುಕಿಗೆ ಪ್ರಥಮ ಚಿಕಿತ್ಸೆ ಅಗತ್ಯ. ಪ್ರಥಮ ಚಿಕಿತ್ಸೆ ನೀಡುವವರು ವ್ಯಕ್ತಿಯ ಪ್ರಾಣ ಉಳಿಸುವ ಕೆಲಸ ಮಾಡುತ್ತಾರೆ. ತೃಪ್ತಿಯಿಂದ ಸೇವೆ ಸಲ್ಲಿಸಿದರೆ ಅದೇ ಒಂದು ಸಾರ್ಥಕ ಬದುಕು ಎಂದರು.
ಗೃಹರಕ್ಷಕ ದಳ ಘಟಕದ ಅಧಿಕಾರಿ ವಾದಿರಾಜ ದೇಶಪಾಂಡೆ ಮಾತನಾಡಿ, ಪ್ರತಿಯೊಬ್ಬರು ನೈಜ ಜೀವನದಲ್ಲಿನ ಸನ್ನಿವೇಶಗಳನ್ನು ಎದುರಿಸುವ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆಯಬೇಕು. ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಬೇಕು. ಆ ಜ್ಞಾನವನ್ನು ಇತರರಿಗೂ ತಿಳಿಸಬೇಕು. ಪ್ರಥಮ ಚಿಕಿತ್ಸೆಯಿಂದ ಶೇ. 50ರಷ್ಟು ಸಾವುಗಳು ಸಂಭವಿಸುವುದನ್ನು ತಪ್ಪಿಸಬಹುದು ಎಂದರು.
ಕಮಲಾಬಾಯಿ ಲಮಾಣಿ ಮಾತನಾಡಿದರು. ಡಾ.ಉಮೇಶ ಹಳ್ಳಿಕೇರಿ, ಡಾ ಜ್ಯೋತಿ ಉಡುಪಿ ಪ್ರಥಮ ಚಿಕಿತ್ಸೆ ತರಬೇತಿ ನೀಡಿದರು. ಗೃಹರಕ್ಷಕ ಅಧಿಕಾರಿ ಡಾ.ಪ್ರಕಾಶ ಪವಾಡಶೆಟ್ಟರ, ಸಿಬ್ಬಂದಿ, ಇತರರು ಇದ್ದರು.