ಬಾಗಲಕೋಟೆ: ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದಲ್ಲಿ ಯಾತ್ರಿ ನಿವಾಸ ನಿರ್ಮಿಸುವ ಮೂಲಕ ಮುಚಖಂಡಿ ಕ್ಷೇತ್ರ ಬೆಳವಣಿಗೆಗೆ ಜೀರ್ಣೋದ್ದಾರ ಕಮೀಟಿಯಿಂದ ಇದು ಉತ್ತಮ ಕಾರ್ಯವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹೇಳಿದರು.
ತಾಲೂಕಿನ ಮುಚಖಂಡಿಯಲ್ಲಿ ಭಾನುವಾರ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯಿಂದ ನೂತನವಾಗಿ ನಿರ್ಮಿಸಿರುವ ಭದ್ರಕಾಳಮ್ಮ ಯಾತ್ರಿ ನಿವಾಸ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.
ಐತಿಹಾಸಿಕ ಮುಚಖಂಡಿ ವೀರಭದ್ರೇಶ್ವರ ಕ್ಷೇತ್ರಕ್ಕೆ ಬರುವ ಜನರಿಗೆ ವಸತಿಗಾಗಿ ಇಲ್ಲಿ ಯಾತ್ರಾ ನಿವಾಸ ನಿರ್ಮಸಲಾಗಿದೆ. ಅನ್ಯ ರಾಜ್ಯದ ಭಕ್ತರಿಗೆ ಇದು ಸಾಕಷ್ಟು ಅನುಕೂಲವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಮೀಟಿ ಅಧ್ಯಕ್ಷ ಗುರುಬಸವ ಸುಳಿಭಾವಿ ಮಾತನಾಡಿ, ಭಕ್ತರ ದೇಣಿಗೆ ಹಾಗೂ ಸಮಿತಿಯಿಂದ ಅತ್ಯಂತ ಸುಸಜ್ಜಿತವಾದ ಬಾತರೂಮ ಕೂಡಿಕೊಂಡಿರುವ ೩-೪ ಬೆಡ್‌ಗಳ ೧೬ ಕೊಠಡಿಗಳ ಭವ್ಯ ಯಾತ್ರಿ ನಿವಾಸ ನಿರ್ಮಿಸಲಾಗಿದ್ದು, ಇದರಲ್ಲಿ ಹವಾ ನಿಯಂತ್ರಿತ ಕೊಠಡಿಗಳು ಕೂಡಾ ಲಭ್ಯವಿದೆ. ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾಸನದ ಕ್ಷೇತ್ರ ಬೆಳವಣಿಗೆಗೆ ಇದು ಕೂಡಾ ಸಹಕಾರಿ ಯಾಗಲಿದೆ ಎಂದರು.
ಸಮಾರಂಭದಲ್ಲಿ ಬಿಲ್ ಕೆರೂರ ಬಿಲ್ವಾಶ್ರಮದ ಸಿದ್ದಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಪ್ರಧಾನ ಅರ್ಚಕರಾದ ಪ್ರಭುಸ್ವಾಮಿ ಸರಗಣಾಚಾರಿ, ಸಂಗಯ್ಯ ಸರಗಣಾಚಾರಿ, ಮಲ್ಲಿಕಾರ್ಜುನ ಹಂಡಿ, ಸಂಗಮೇಶ ಹೊನ್ನುರ, ಸಿದ್ದರಾಮಯ್ಯ ಹಿರೇಮಠ, ರಾಚಯ್ಯ ಸರಗಣಾರಿ. ಹರೀಶ ಪಾಟೀಲ, ವೀರಣ್ಣ ಗಂಗಾವತಿ, ಅಲ್ಲಯ್ಯ ಸರಗಣಾಚಾರಿ ಇದ್ದರು.