ಜಿಲ್ಲೆ

ಜೀತವಿಮುಕ್ತರಿದೆ ಸೌಲಭ್ಯಗಳನ್ನು ಒದಗಿಸಿ

ಚಾಮರಾಜನಗರ: ಜಿಲ್ಲೆಯಲ್ಲಿ ಜೀತ ವಿಮುಕ್ತರಿಗೆ ಸಾಮಾಜಿಕ ಹಾಗೂ ಭದ್ರತೆ, ಆಶ್ರಯ ಮನೆ, ಬಿಡುಗಡೆ ಪತ್ರ, ಪರಿಹಾರ ಸೌಲಭ್ಯ ವಿತರಣೆ ಸೇರಿದಂತೆ ಇನ್ನಿತರೆ ಸ್ಥಿತಿಗತಿ ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 253 ಜೀತ ವಿಮುಕ್ತರಿದ್ದು, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಜೀತ ವಿಮುಕ್ತರ ಪೈಕಿ ಕೆಲವರು ಮರಣ ಹೊಂದಿದ್ದಾರೆ. ಉಳಿದವರಿಗೆ ಇನ್ನೂ ಗುರುತಿನ ಚೀಟಿ, ಬಿಡುಗಡೆ ಪತ್ರ ನೀಡಿರುವುದಿಲ್ಲ. ಜಮೀನು ನೀಡಲು ಗಡಿ ಗುರುತಿಸಿ ಹಸ್ತಾಂತರ ಮಾಡಬೇಕು. ಕಳೆದ ಸಭೆಯಲ್ಲಿ ಈ ಬಗ್ಗೆ ವಿಸ್ತತವಾಗಿ ಚರ್ಚಿಸಿ ತುರ್ತಾಗಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಸ್ಥಳ ಲಭ್ಯವಿಲ್ಲದಿದ್ದರೆ ಉಪವಿಭಾಗಧಿಕಾರಿ ಹಂತದಲ್ಲಿ ದರ ನಿಗದಿಪಡಿಸಿ ಭೂ ಒಡೆತನದಡಿ ಜಮೀನು ಖರೀದಿಸಿ ಹಂಚಿಕೆ ಮಾಡಬೇಕು. ಜೀತವಿಮುಕ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ವಿಳಂಬ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಸೂಚಿಸಿದರು.

ಜೀತವಿಮುಕ್ತರಿಗೆ ಅವಶ್ಯ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಇದು ಮರುಕಳಿಸಬಾರದು. ಜಿಲ್ಲಾಮಟ್ಟದಲ್ಲಿ ನಡಾವಳಿ ತಯಾರಿಸಬೇಕು. ಜೀತವಿಮುಕ್ತರಿಗೆ ಮಂಜೂರಾಗಿರುವ ಜಮೀನುಗಳು ಬೇರೆ ವ್ಯಕ್ತಿಗಳ ಸ್ವಾಧೀನದಲ್ಲಿದ್ದರೆ ಅದನ್ನು ಒತ್ತುವರಿ ಅಥವಾ ತೆರವುಗೊಳಿಸುವ ಪ್ರಕ್ರಿಯೆ ಶೀಘ್ರವಾಗಿ ಆಗಬೇಕು. ಹಕ್ಕುಪತ್ರ ವಿತರಣೆ ಮಾಡಬೇಕು. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಭೂದಾಖಲೆ ಅಧಿಕಾರಿಗಳು ಒಂದು ವಾರದೊಳಗೆ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಜೀತವಿಮುಕ್ತರ ಸ್ಥಿತಿಗತಿ ವರದಿ ಸಲ್ಲಿಸಬೇಕು. ಅಲ್ಲದೆ ಅ.13ರಂದು ನಿಗಧಿಪಡಿಸಲಾಗಿರುವ ಮುಂದಿನ ಸಭೆಯೊಳಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜೀತವಿಮುಕ್ತರಿಗೆ ಸೌಲಭ್ಯಗಳನ್ನು ಒದಗಿಸಲು ಮುಂದಾಗುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ಟಿ. ಕವಿತಾ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆಗಾಗಿ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನೂತನ ಸದಸ್ಯರು ದೌರ್ಜನ್ಯ ಪ್ರಕರಣಗಳು ತಾಲೂಕುವಾರು ಎಷ್ಟು ಪ್ರಕರಣಗಳು ದಾಖಲಾಗಿವೆ. ಯಾವ ಹಂತದಲ್ಲಿವೆ. ಪರಿಹಾರ ದೊರಕಿದೆಯೇ, ಇಲ್ಲವೇ, ಎಂಬುದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಪರಿಶಿಷ್ಟ ಜನಾಂಗದವರಿಗೆ ನ್ಯಾಯ ದೊರಕಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅರಕಲವಾಡಿ ನಾಗೇಂದ್ರ, ರಮೇಶ್ ಪ್ರಭು, ವೃಷಬೇಂದ್ರ, ನಟರಾಜು ಮಾಳಿಗೆ, ಸಿದ್ದರಾಜು, ಕೇತಮ್ಮ, ರಜನಿ ಕೆ. ತಿವಾರಿ, ಅರ್ಪಿತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು ಹಾಗೂ ಇತರರು ಹಾಜರಿದ್ದರು.