ಜಿಲ್ಲೆ

ಜೀತ ಪದ್ಧತಿ ಇನ್ನೂ ಜೀವಂತ

ಜಿಲ್ಲಾಧಿಕಾರಿ ರವೀಂದ್ರ ಬೇಸರ ಪಿಡುಗು ನಿವಾರಣೆಗೆ ಜನರ ಸಹಕಾರ ಅಗತ್ಯ

ಚಿಕ್ಕಬಳ್ಳಾಪುರ: ಶಿಕ್ಷಾರ್ಹ ಅಪರಾಧವಾಗಿದ್ದರೂ ಅನಿಷ್ಟ ಜೀತಪದ್ಧತಿ ಇನ್ನೂ ಜೀವಂತವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬೇಸರಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ ಮೈಸೂರು, ಚಿಕ್ಕಮಗಳೂರು, ಬೆಳಗಾವಿ, ಬಾಗಲಕೋಟೆ, ರಾಮನಗರ, ಕೋಲಾರ, ತುಮಕೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಜೀತಪದ್ಧತಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಬಾಲ ಕಾರ್ಮಿಕನಾಗಿ ಕೆಲಸ ಮಾಡುವವರು ಮುಂದೆ ಜೀತ ಕಾರ್ಮಿಕರಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದರು.

ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ರಕ್ಷಣಾತ್ಮಕ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಅನಿಷ್ಠ ಪಿಡುಗಿನ ನಿವಾರಣೆಯು ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬರ ಹೊಣೆಯಾಗಿದೆ. ಜೀತ ಪದ್ಧತಿಗೆ ಸಿಲುಕಿದ ವ್ಯಕ್ತಿಯನ್ನು ಗುರುತಿಸಿ, ಸಂತ್ರಸ್ತರಿಗೆ ಸರ್ಕಾರದ ಪುನರ್ವಸತಿ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿಯನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಇದಕ್ಕೆ ಸರ್ಕಾರೇತರ ಸಂಸ್ಥೆಗಳು, ಜನರು ಅಗತ್ಯ ಸಹಕಾರ ನೀಡಬೇಕು ಎಂದರು.

ಕೃಷಿ, ರೇಷ್ಮೆ, ತೋಟಗಾರಿಕೆ ತಾಕುಗಳು, ಕಟ್ಟಡ ಕಾಮಗಾರಿ, ಕೊಳವೆಬಾವಿ ಕೊರೆಯುವ ಘಟಕಗಳು, ನಗರ ಪ್ರದೇಶದ ಸಣ್ಣ ಕೈಗಾರಿಕೆಗಳು, ಜವಳಿ ಮಿಲ್‌ಗಳು, ಹೋಟೆಲ್, ಕಲ್ಲು ಕ್ವಾರಿ, ಮಾಂಸ ಸಂಸ್ಕರಣಾ ಘಟಕಗಳು, ಇಟ್ಟಿಗೆ ಕಾರ್ಖಾನೆ ಸೇರಿ ವಿವಿಧ ವಲಯಗಳಲ್ಲಿ ಜೀತ ಕಾರ್ಮಿಕರು ಕಂಡು ಬರುತ್ತಿದ್ದಾರೆ. ಅದರಲ್ಲೂ ವಲಸೆ ಜೀತ ಕಾರ್ಮಿಕರ ಸಂಖ್ಯೆಯೇ ಹೆಚ್ಚು. ಇಂತಹ ಅನಿಷ್ಟ ಪದ್ಧತಿಗೆ ಕಾರಣರಾಗುವ ಮುಖ್ಯಸ್ಥರು, ಮಾಲೀಕರು ಸೇರಿ ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರವೀಂದ್ರ ಎಚ್ಚರಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಜೀತ ಪದ್ಧತಿ ನಿರ್ಮೂಲನೆ, ಜೀತದಿಂದ ವಿಮುಕ್ತರಾದವರಿಗೆ ಪುನರ್ವಸತಿ, ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ, ಆರ್ಥಿಕ ಸಬಲೀಕರಣಕ್ಕೆ ನೆರವು ಸೇರಿ ಹಲವು ಕೆಲಸಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು, ಪ್ರಕರಣಗಳನ್ನು ಶೂನ್ಯಕ್ಕಿಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಪೊಲೀಸ್ ಉಪಾಧೀಕ್ಷಕರಾದ ಶಿವಕುಮಾರ್, ಮುರಳಿ, ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ನಿರ್ಮಲಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್, ರಾಜ್ಯ ಮಹಿಳಾ ಘಟಕದ ಜೀವಿಕ ಸಂಚಾಲಕಿ ರತ್ನಮ್ಮ, ರೂಟ್ಸ್ ಫಾರ್ ಫ್ರೀಡಂ ಸಂಸ್ಥೆಯ ಪದಾಧಿಕಾರಿ ರವೀಂದ್ರ ಮತ್ತಿತರರು ಇದ್ದರು.

ಪ್ರತಿಜ್ಞಾವಿಧಿ ಸ್ವೀಕಾರ

ಕಾರ್ಯಕ್ರಮದಲ್ಲಿ ಜೀತ ಪದ್ಧತಿ ನಿರ್ಮೂಲನೆಯ ಯುಕ್ತ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪ್ರತಿನಿಧಿಗಳು, ಜೀತ ವಿಮುಕ್ತಿಗಾಗಿ ಶ್ರಮಿಸುತ್ತಿರುವ ವಿವಿಧ ಸರ್ಕಾರೇತರ ಸಂಸ್ಥೆಗಳ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪಾ ಜೀತ ಪದ್ಧತಿ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.