ಚಾಮರಾಜನಗರ: ಜಿಲ್ಲೆಯಾದ್ಯಂತ ವರ್ಷದ ಮೊದಲನೇ ಹಬ್ಬ ಸಂಕ್ರಾಂತಿಯನ್ನು ಜನರು ಮಂಗಳವಾರ ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವರ ವಿಗ್ರಹಗಳನ್ನು ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಜನರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಗರ ಪ್ರದೇಶದಲ್ಲಿ ಜನರು ತಮ್ಮ ಮನೆಗಳನ್ನು ತಳಿರು, ತೋರಣಗಳಿಂದ ಸಿಂಗರಿಸಿ ಸಂಬಂಧಿಕರಿಗೆ ಎಳ್ಳು-ಬೆಲ್ಲ ಹಂಚಿ ಸಂತಸ ಹಂಚಿಕೊಂಡರು. ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಗ್ರಾಮೀಣ ಪ್ರದೇಶದಲ್ಲೂ ಹಬ್ಬದ ಸಂಭ್ರಮ ಮನೆಮಾಡಿತ್ತು. ಕೃಷಿಕರು ತಮ್ಮ ಜಮೀನು, ತೋಟಗಳಲ್ಲಿ ಇರುವ ಮರಗಳಿಗೆ ಕೆಮ್ಮಣ್ಣು ಹಾಗೂ ಸುಣ್ಣದ ಪಟ್ಟೆಗಳನ್ನು ಬಳಿದು ವಿಶೇಷ ಪೂಜೆ ಸಲ್ಲಿಸಿದರು. ಹಸು, ಎತ್ತು ಹಾಗೂ ಇನ್ನಿತರೆ ಜಾನುವಾರುಗಳನ್ನು ಸಿಂಗರಿಸಿ, ಕೆಲವು ಗ್ರಾಮಗಳಲ್ಲಿ ಕಿಚ್ಚುಹಾಯಿಸಿ ಸಂಭ್ರಮಿಸಿದರು. ರೈತಾಪಿ ವರ್ಗಕ್ಕೆ ಸಂಕ್ರಾಂತಿ ಸುಗ್ಗಿಯ ಹಬ್ಬವಾಗಿದ್ದು, ತಾವು ಬೆಳೆದ ಬೆಳೆಯನ್ನು ರಾಶಿಮಾಡಿ ಧವಸ-ಧಾನ್ಯಗಳಿಗೆ ಪೂಜೆಸಲ್ಲಿಸಿದರು.
ಕಿಚ್ಚು ಹಾಯಿಸಿ ಸಂಭ್ರಮ:
ಗ್ರಾಮೀಣ ಪ್ರದೇಶದಲ್ಲಿ ಜನರು ಜಾನುವಾರುಗಳಿಗೆ ವಿಶೇಷ ಪೂಜೆಸಲ್ಲಿಸಿ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಹಲವು ಗ್ರಾಮಗಳಲ್ಲಿ ಕೃಷಿಕರು ತಾವು ಬೆಳೆದ ಬೆಳೆಗಳನ್ನು ರಾಶಿ ಹಾಕಿ ಪೂಜೆಸಲ್ಲಿಸಿದರು. ಹಸು ಮತ್ತು ಎತ್ತುಗಳನ್ನು ವಿವಿಧ ಬಗೆಯಲ್ಲಿ ಸಿಂಗರಿಸಿ ಮೆರವಣಿಗೆ ಮಾಡಿದರು. ಈ ವೇಳೆ ಗ್ರಾಮದ ರಸ್ತೆಗಳಲ್ಲಿ ಹುಲ್ಲು ಹರಡಿ, ಅದಕ್ಕೆ ಬೆಂಕಿಹಾಕಿ ಜಾನುವಾರುಗಳಿಂದ ಕಿಚ್ಚುಹಾಯಿಸಿದರು. ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿರುವ ಅಮೃತ ಭೂಮಿಯಲ್ಲಿ ವಿಶೇಷವಾಗಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಯಿತು. ಹಸು ಎತ್ತುಗಳಿಗೆ ಹಾಗೂ ಕೃಷಿ ಸಲಕರಣೆಗಳಿಗೆ ವಿಶೇಷ ಪೂಜೆಸಲ್ಲಿಸಿ ಒಕ್ಕಣೆ ಕಣದಲ್ಲಿ ದವಸಧಾನ್ಯಗಳನ್ನು ರಾಶಿಮಾಡಿ ಪೂಜೆ ಸಲ್ಲಿಸಲಾಯಿತು.
ಅದ್ಧೂರಿ ಕುಂಭೇಶ್ವರ ಜಾತ್ರೆ:
ತಾಲೂಕಿನ ಚಂದಕವಾಡಿ ಹೋಬಳಿಯ ಕುಂಭೇಶ್ವರ ಕಾಲೋನಿ ಸಮೀಪದ ಕರಡಿಹಳ್ಳ ಕುಂಭೇಶ್ವರ ಜಾತ್ರೆ ಪ್ರತಿ ವರ್ಷದಂತೆ ಸಂಕ್ರಾಂತಿಯ ಹಬ್ಬದ ದಿನದಂದು ಅದ್ಧೂರಿಯಾಗಿ ನಡೆಯಿತು. ಮುಂಜಾನೆಯೇ ಶ್ರೀಮಹದೇಶ್ವರ ಸ್ವಾಮಿ ವಿಗ್ರಹವನ್ನು ಸವರ್ಣಾವತಿ ಹೊಳೆಯ ನೀರಿನಲ್ಲಿ ಅಭಿಷೇಕ ಮಾಡಿ ನಂತರ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು. ಹುಲಿವಾಹನ, ಸತ್ತಿಗೆ, ಸೂರಪಾನಿ, ಡೊಳ್ಳು ಕುಣಿತ, ವೀರಭದ್ರ ಕುಣಿತ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಹಾ ಮಂಗಳಾರತಿಯ ನಂತರ ಭಕ್ತಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಜಾತ್ರಾಮಹೋತ್ಸವದಲ್ಲಿ ಬೆಂಗಳೂರು, ಮೈಸೂರು, ರಾಮನಗರ ಚಾಮರಾಜನಗರ ಸುತ್ತಮುತ್ತಲಿನ ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿಗಳಾದ ವಾಟಾಳ್, ಎಚ್.ಎಂ.ಮಂಜೇಶ್ ಗೌಡ, ವಾಟಲ್ ಬಾಬು, ನಾಗೇಶ್ ವಾಟಲ್, ನಾಗರಾಜು, ಸಿದ್ದಪ್ಪ, ಪುಟ್ಟಸ್ವಾಮಿ, ಕೃಷ್ಣಶೆಟ್ಟಿ, ದೊಳ್ಳಿಪುರ, ವೆಂಕಟಶೆಟ್ಟಿ, ಡಿ.ಬಿ.ಮಹೇಶ್, ಬಸವಗೌಡರ್ ಹಾಗೂ ಶ್ರೀ ಕುಂಬೇಶ್ವರ ಯುವಕರ ಸಂಘದ ಸದಸ್ಯರು ಹಾಜರಿದ್ದರು.
ಶ್ರೀನಾರಾಯಣಸ್ವಾಮಿ ದೇಗುಲದಲ್ಲಿ ಸಂಕ್ರಾಂತಿ:
ನಗರದ ಕೊಳದ ಬೀದಿಯಲ್ಲಿರುವ ಶ್ರೀದೇವಿ-ಭೂದೇವಿ ಸಮೇತ ಶ್ರೀಕಾಡುನಾರಾಯಣಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಭಕ್ತಾದಿಗಳಿಗೆ ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಅರ್ಚಕ ರಾಮಚಂದ್ರ ಮಾತನಾಡಿ, ಉತ್ತರಾಯಣ ಪುಣ್ಯಕಾಲವಾಗಿದ್ದು, ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿ ಶುಭ ಫಲಗಳನ್ನು ನೀಡುವ ಪುಣ್ಯಕಾಲವಾಗಿದೆ. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ಸುಗ್ಗಿಯ ಸಂಭ್ರಮ ರೈತರಲ್ಲಿ ಮತ್ತಷ್ಟು ವೃದ್ಧಿಸಿ ಸಂತಸ, ಸಮೃದ್ಧಿ ಎಲ್ಲೆಡೆ ಪಸರಿಸಲಿ ಎಂದು ಲೋಕ ಕಲ್ಯಾಣಾರ್ಥಕವಾಗಿ ಶ್ರೀನಾರಾಯಣಸ್ವಾಮಿಯಲ್ಲಿ ಪ್ರಾರ್ಥಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.