ಜಿಲ್ಲೆ

ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ

ಸಂತೋಷ ದೇಶಪಾಂಡೆ

ಬಾಗಲಕೋಟೆ: ನರಗುಂದ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಂಗಳವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಶಾಂತಿಯುತವಾಗಿ ಮತದಾನ ನಡೆದ ಬಗ್ಗೆ ವರದಿಯಾಗಿದೆ.

ಬೆಳಿಗ್ಗೆಯಿಂದಲೇ ಮೃದ್ದರು, ವಿಶೇಷ ಚೇತನರು, ಮಹಿಳೆಯರು, ಯುವ ಮತದಾರರು ಉತ್ಸುಕರಾಗಿ ಮತಗಟ್ಟೆಗಳಿಗೆ ಆಗಮಿಸುತ್ತಿರುವುದು ಕಂಡುಬಂದಿತು. ಬಹುತೇಕ ಮತಗಟ್ಟೆಗಳಲ್ಲಿ ಮಹಿಳಾ ಮತದಾರರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದ್ದು, ಮತದಾರರಿಗೆ ವಿಶ್ರಾಂತಿ ಕೊಠಡಿ, ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಪುರುಷ ಮತದಾರರಕ್ಕಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವ ದೃಷ್ಯ ಮಾದ್ಯಮ ತಂಡ ಮತದಾನದ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಕಂಡುಬಂದಿತು.

ಬೀಳಗಿ ಮತಕ್ಷೇತ್ರದ ಹೂಲಗೇರಿ ಗ್ರಾಮದಲ್ಲಿ ಮ.ಸಂ.220 ರಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಒಟ್ಟು 222 ಜನ ಮತ ಚಲಾವಣೆಗೊಂಡಿದ್ದವು. ಅದರಲ್ಲಿ 110 ಪುರುಷರು, 112 ಜನ ಮಹಿಳೆಯರು ಮತ ಚಲಾಯಿಸಿದ್ದರು. ಮ.ಸಂ221 ರಲ್ಲಿ 691 ಪೈಕಿ 281, ಬಾದಾಮಿ ಮತಕ್ಷೇತ್ರದ ಕಟಗೇರಿ ಮ.ಸಂ.7ರಲ್ಲಿ 12 ಗಂಟೆ ಅವಧಿಯಲ್ಲಿ 784 ಪೈಕಿ 259, ಮ.ಸಂ.5ರಲ್ಲಿ 908 ಮತದಾರರ ಪೈಕಿ 282, ಮ.ಸಂ.6ರಲ್ಲಿ 807 ಪೈಕಿ 254, ತಿಮ್ಮಸಾಗರದಲ್ಲಿ ಮಸಂ.15ರಲ್ಲಿ 856 ಪೈಕಿ 302, ಮಸಂ.16 ರಲ್ಲಿ 508 ಪೈಕಿ 241, ಲಿಂಗಾಪೂರ ಗ್ರಾಮದ ಮಸಂ.12 ರಲ್ಲಿ 1057 ಪೈಕಿ 347 ಮತ ಚಲಾವಣೆಗೊಂಡಿದ್ದವು. ಅದರಲ್ಲ್ಲಿ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತ ಚಲಾಯಿಸಿರುವ ಬಗ್ಗೆ ವರದಿಯಾಗಿರುವುದು ಕಂಡುಬಂದಿತು.

ಬೆಳಿಗ್ಗೆ 7 ರಿಂದ 9 ಗಂಟೆಯಲ್ಲಿ ಶೇ.8.59 ರಷ್ಟು ಮತದಾನವಾದರೆ, 11 ವರೆಗೆ ಶೇ.23.80 ರಷ್ಟು, ಮಧ್ಯಾಹ್ನ 1 ವರೆಗೆ ಶೇ.42.01 ರಷ್ಟು, ಮಧ್ಯಾಹ್ನ 3 ವರೆಗೆ 55.15 ರಷ್ಟು, ಸಂಜೆ 5 ವರೆಗೆ ಶೇ.67.57 ರಷ್ಟು ಮತದಾನವಾಗಿರುವ ವರದಿಯಾಗಿದ್ದು ಕಂಡುಬಂದಿತು. ಸಂಜೆ 5 ಗಂಟೆಯ ವರದಿಯಲ್ಲಿ ಜಿಲ್ಲೆಯ ಏಳು ಮತಕ್ಷೇತ್ರಗಳ ಪೈಕಿ ತೇರದಾಳ ಮತಕ್ಷೇತ್ರದಲ್ಲಿ ಹೆಚ್ಚು ಮತದಾನವಾದರೆ, ಬಾಗಲಕೋಟೆ ಮತಕ್ಷೇತ್ರದಲ್ಲಿ ಕಡಿಮೆ ಮತದಾನವಾದ ವರದಿಯಾಗಿದೆ.

ಮುಕ್ತ, ಶಾಂತಿಯುವ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮಕೈಗೊಂಡಿತ್ತು. ಮತದಾನ ಕಾರ್ಯಕ್ಕೆ 9274 ಮತಗಟ್ಟೆ ಸಿಬ್ಬಂದಿಗಳು ಹಾಗೂ 1519 ಪೊಲೀಸ್ ಸಿಬ್ಬಂದಿ, 418 ಹೋಮ ಗಾರ್ಡ, 3 ಕೆ.ಎಸ್.ಆರ್.ಪಿಯ 85 ಸಿಬ್ಬಂದಿಗಳು ಸೇರಿ ಒಟ್ಟು 3500 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. 1683 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಸಹ ಮಾಡಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದ ವರದಿಯಾಗಿದೆ.