ಮಡಿಕೇರಿ: ಜಿಲ್ಲೆಯಾದ್ಯಂತ ಮಂಗಳವಾರವೂ ಮಳೆ ಮುಂದುವರಿದಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಧ್ಯಾಹ್ನ ತನಕ ಜೋರು ಮಳೆ ಬರುತ್ತಿತ್ತು. ನಂತರ ಅಬ್ಬರ ಸ್ವಲ್ಪ ಕಡಿಮೆ ಆದರೂ ಆಗಾಗ್ಗೆ ಮಳೆ ಸುರಿಯುತ್ತಲೇ ಇತ್ತು. ಇದರ ಜತೆಗೆ ಚಳಿಯ ಅನುಭವವೂ ಹೆಚ್ಚಾಗಿ ಇತ್ತು. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆಯ ಜೂ.18ರಿಂದ ಜೂ. 22ರ ತನಕದ ಹವಾಮಾನ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರುವಿನಿಂದ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಜೂ.18 ಮತ್ತು ಜೂ.19ರಂದು ಭಾರಿ ಮಳೆಯೊಂದಿಗೆ ಬಿರುಗಾಳಿ ಬೀಸುವ ಮುನ್ಸೂಚನೆ ಕೊಡಲಾಗಿದೆ.
ಸೋಮವಾರಪೇಟೆ ಭಾಗದಲ್ಲಿ ಸಾಧಾರಣ ಮಳೆ ಆಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಬೆಳಗ್ಗೆ ಉತ್ತಮ ಮಳೆ ಇತ್ತು. ಮಧ್ಯಾಹ್ನ ನಂತರ ಇಳಿಮುಖ ಆಯಿತು. ಭಾಗಮಂಡಲ, ನಾಪೋಕ್ಲು ಭಾಗದಲ್ಲೂ ದಿನಪೂರ್ತಿ ಮಳೆಯ ವಾತಾವರಣ ಕಂಡು ಬಂತು. ವಿರಾಜಪೇಟೆ, ಗೋಣಿಕೊಪ್ಪಲು, ಸಿದ್ದಾಪುರ, ಶನಿವಾರಸಂತೆ, ಸುಂಟಿಕೊಪ್ಪ ಸುತ್ತಮುತ್ತಲು ಭಾರಿ ಮಳೆ ಆಗಿದೆ.
ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದು, ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿದೆ.ಈ ಬಗ್ಗೆ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಅಪಾಯದ ಸ್ಥಳಗಳಿಗೆ ತೆರಳದಂತೆ ಹಾಗೂ ಆ ಭಾಗದ ಜನರು ಕಾಳಜಿ ಕೇಂದ್ರಕ್ಕೆ ತೆರಳಲು ಸೂಚಿಸಿದ್ದಾರೆ.
ಭಾಗಮಂಡಲ ಹೋಬಳಿ ಚೇರಂಬಾಣೆ ಗ್ರಾಮ ಪಂಚಾಯತಿಯ ಬೆಂಗೂರು ಗ್ರಾಮದ ದೋಣಿ ಕಾಡು ಎಂಬಲ್ಲಿ ಪ್ರವಾಹ ಬಂದಿದ್ದು ಸ್ಥಳೀಯರು ದೋಣಿ ಮುಖಾಂತರ ಸಂಚಾರ ಮಾಡುತ್ತಿದ್ದಾರೆ. ಈ ಪ್ರದೇಶಕ್ಕೆ ಮಡಿಕೇರಿ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾವೇರಿ ಉಗಮಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಇದರಿಂದಾಗಿ ಭಾಗಮಂಡಲ ತ್ರಿವೇಣಿ ಸಂಗಮ ಮುಳುಗಡೆಯಾಗಿದ್ದು, ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುತ್ತಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 75.67 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.36 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 989.51 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 496.42 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕು 122.45 ಮಿ.ಮೀ., ವಿರಾಜಪೇಟೆ ತಾಲೂಕು 72.10 ಮಿ.ಮೀ., ಸೋಮವಾರಪೇಟೆ ತಾಲೂಕು 74.35 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 38.40 ಮಿ.ಮೀ. ಸರಾಸರಿ ಮಳೆಯಾಗಿದೆ.
ಭಾಗಮಂಡಲ ಹೋಬಳಿಯಲ್ಲಿ ಅತೀ ಹೆಚ್ಚು ಅಂದರೆ 195 ಮಿಮೀ ಮಳೆ ದಾಖಲಾಗಿದೆ.
ಉಳಿದಂತೆ ಮಡಿಕೇರಿ ಕಸಬಾ 90, ನಾಪೋಕ್ಲು 88.80, ಸಂಪಾಜೆ 116, ವಿರಾಜಪೇಟೆ 77.20, ಅಮ್ಮತ್ತಿ 67, ಹುದಿಕೇರಿ 87.60, ಶ್ರೀಮಂಗಲ 56.60, ಪೊನ್ನಂಪೇಟೆ 80, ಬಾಳೆಲೆ 60.09, ಸೋಮವಾರಪೇಟೆ 74, ಶನಿವಾರಸಂತೆ 48, ಶಾಂತಳ್ಳಿ 140, ಕೊಡ್ಲಿಪೇಟೆ 35.40, ಕುಶಾಲನಗರ 24.80 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 52 ಮಿ.ಮೀ.ಮಳೆಯಾಗಿದೆ.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಮಂಗಳವಾರದ ಮಾಹಿತಿ ಪ್ರಕಾರ 2850.89 ಅಡಿಗಳಷ್ಟು ನೀರಿದೆ. 10 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಮಂಗಳವಾರ ಮಧ್ಯಾಹ್ನದ ಮಾಹಿತಿ ಪ್ರಕಾರ 18 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.