ಜಾನಕಿ ಕೆ.ಎಂ 
ಜಿಲ್ಲೆ

ಜಿಲ್ಲೆಯಾದ್ಯಂತ ಕರಡು ಮತದಾರರ ಪಟ್ಟಿ ಪ್ರಕಟ

ಬಾಗಲಕೋಟೆ: ಜಿಲ್ಲೆಯಾದ್ಯಂತ ಕರಡು ಮತದಾರರ ಪಟ್ಟಿಗಳನ್ನು ಆಯಾ ತಾಲೂಕಾ ತಹಶೀಲ್ದಾರ ಹಾಗೂ ಮತಗಟ್ಟೆಗಳಲ್ಲಿ ಪ್ರಚುರ ಪಡಿಸಲಾಗಿದ್ದು, ಮತದಾರರು ತಮ್ಮ ಹೆಸರುಗಳು ಮತದಾರರ ಪಟ್ಟಿಗಳಲ್ಲಿ ಇರುವ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ರ ಕಾರ್ಯವನ್ನು ಆಗಸ್ಟ 20 ರಿಂದ ನವೆಂಬರ 28 ವರೆಗೆ ಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಈ ಮೊದಲು 1726 ಮತಗಟ್ಟೆಗಳಿದ್ದು, ಮತದಾರರ ಪಟ್ಟಿಗಳ ವಿಶೇಷ ಪರೀಕ್ಷರಣೆ ಸಂದರ್ಭದಲ್ಲಿ 8 ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ಸ್ಥಾಪಿಸಿರುವದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 1734 ಮತಗಟ್ಟೆಗಳಾಗಿವೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 16,24,517 ಜನ ಮತದಾರರು ಇದ್ದು, ಈ ಪೈಕಿ 8,02,942 ಪುರುಷ ಮತದಾರರು ಹಾಗೂ 8,21,478 ಮಹಿಳಾ ಮತದಾರರು ಹಾಗೂ 97 ಇತರೆ ಮತದಾರರು ಇದ್ದಾರೆ. ಜನವರಿ 1, 2025, ಎಪ್ರೀಲ್ 4, 2025, ಜುಲೈ 1, 2025 ಹಾಗೂ ಅಕ್ಟೋಬರ 1, 2025ಕ್ಕೆ 18 ವರ್ಷ ಪೂರೈಸುವ 17 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಒಟ್ಟು 4 ಅರ್ಹತಾ ದಿನಾಂಕಗಳು ಇರುತ್ತವೆ. ಈ ನಾಲ್ಕು ಅರ್ಹ ದಿನದಂದು ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನವೆಂಬರ 28 ವರೆಗೆ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಹೆಸರು ಸೇರ್ಪಡೆ, ತೆಗೆದು ಹಾಕುವುದು ಹಾಗೂ ತಿದ್ದುಪಡಿ ಮಾಡಲು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಇರುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ಓಟರ್ ಹೆಲ್ಪಲೈನ್ ಆಪ್ & ಓಟರ್ ಸರ್ವಿಸ್ ಪೋರ್ಟಲ್ ಮೂಲಕ ಹಾಗೂ ತಮ್ಮ ಭಾಗದ ಮತಗಟ್ಟೆ ಮಟ್ಟದ ಅಧಿಕಾರಿಗಳ ಬಳಿ ನಮೂನೆ-6ನ್ನು ಪಡೆದು ಅಗತ್ಯ ದಾಖಲೆಗಳನ್ನು ಒದಗಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಮೃತ ಮತದಾರರು, ಡಬಲ್ ನೋಂದಣಿಯಾದಂತಹ ಮತದಾರರು ನಮೂನೆ-7ರಲ್ಲಿ ಹಾಗೂ ಮತದಾರ ಗುರುತಿನ ಚೀಟಿಯಲ್ಲಿ ತಿದ್ದುಪಡಿ, ಸ್ಥಳಾಂತರ ಇದ್ದಲ್ಲಿ ನಮೂನೆ-8ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.