ಜಿಲ್ಲೆ

ಜಿಲ್ಲೆಯಲ್ಲೂ ಕಸಾಪ ವಿರುದ್ಧ ಬಂಡಾಯ

ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಬಂಡಾಯ ಉಂಟಾಗಿರುವ ನಡುವೆ, ಗಡಿಜಿಲ್ಲೆ ಚಾಮರಾಜನಗರದಲ್ಲೂ ಪರ-ವಿರೋಧದ ಚರ್ಚೆಗಳು ಹುಟ್ಟುಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ, ಮೈಸೂರು ಹಾಗೂ ಇನ್ನಿತರೆ ಜಿಲ್ಲೆಗಳ ಸಾಹಿತಿಗಳು, ಚಿಂತಕರು ಬಂಡಾಯ ಧ್ವನಿಮೊಳಗಿಸಿದ್ದು, ಗಡಿಜಿಲ್ಲೆ ಚಾಮರಾಜನಗರದ ಸಾಹಿತ್ಯ ವಲಯದಲ್ಲೂ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕೆಲವು ಪದಾಧಿಕಾರಿಗಳೇ ರಾಜ್ಯಾಧ್ಯಕ್ಷರ ನಿಲುವನ್ನು ಖಂಡಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ ಉಳಿವಿಗಾಗಿ ಅಭಿಯಾನವನ್ನು ನಡೆಸುತ್ತೇವೆ ಎಂದು ಮುಂದಾಗಿದ್ದಾರೆ.

ಇನ್ನು ಕೆಲವು ಕಸಾಪ ಸದಸ್ಯರು ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರ ಪರವಾಗಿ ಮೃದುಧೋರಣೆ ಅನುಸರಿಸಿದ್ದು, ಸಾಹಿತ್ಯ ಪರಿಷತ್‌ನ ಇಂದಿನ ಪರಿಸ್ಥಿತಿಗೆ ಕಾರಣರಾದವರು, ಕಸಾಪ ಉಳಿಸಿ ಎಂದು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಪದಾಧಿಕಾರಿಗಳ ನಡೆಯನ್ನು ಖಂಡಿಸಿದ್ದಾರೆ. ಇನ್ನು ಕೆಲವು ಹಿರಿಯ ಸಾಹಿತಿಗಳು ಹಾಗೂ ವಿಚಾರವಾದಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದು, ಉಳಿದಂತೆ ಹೆಚ್ಚಿನ ಸಾಹಿತಿಗಳು ಜಾಣಮೌನವನ್ನು ವಹಿಸಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕಸಾಪ ಅಳಿವು-ಉಳಿವಿನ ಚರ್ಚೆ ನಿಧಾನವಾಗಿ ಕಾವೇರುತ್ತಿದ್ದು, ಸಾಹಿತ್ಯ ವಲಯದಲ್ಲಿ ಸಕ್ರೀಯವಾಗಿರುವವರು ಎಷ್ಟರ ಮಟ್ಟಿಗೆ, ಈ ಚರ್ಚೆಯನ್ನು ತೆಗೆದುಕೊಂಡು ಹೋಗುತ್ತಾರೋ ನೋಡಬೇಕಿದೆ.

ಮೇ 24 ರಂದು ಪೂರ್ವಭಾವಿ ಸಭೆ:

ಜಿಲ್ಲೆಯ ಕನ್ನಡ ನಾಡು-ನುಡಿ ಜಾಗೃತಿ ಸಮಿತಿ ವತಿಯಿಂದ ಮೇ 24 ರಂದು ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ಜಾಗೃತಿ ಕುರಿತು ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾಗಲಿದ್ದು, ಜಿಲ್ಲೆಯ ಸಾಹಿತಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರು, ಹೋರಾಟಗಾರರು, ದಲಿತ ಮತ್ತು ಪ್ರಗತಿಪರ ಚಿಂತಕರು ಹಾಗೂ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ ಸ್ಥಿತಿಗೆ ಕಾರಣರಾದವರು, ಈಗ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಸಭೆ ನಡೆಸುತ್ತಿರುವುದು ದುರಂತವೇ ಸರಿ. ನಿಷ್ಕ್ರಿಯಗೊಂಡಿರುವ ಜಿಲ್ಲಾ ಕಸಾಪ ಬಗ್ಗೆ ಇವರುಗಳ ಅಭಿಪ್ರಾಯ ಏನು? ಇದುವರೆವಿಗೂ ಇವರು ಯಾಕೆ, ಈ ಬಗ್ಗೆ ಚಕಾರ ಎತ್ತಲಿಲ್ಲ. ಈಗ ಅವರಿಗೆ ತಪ್ಪಿನ ಅರಿವಾಗಿದೆಯೇ?

-ಸಿ.ಎಂ.ನರಸಿಂಹಮೂರ್ತಿ, ಹಿರಿಯ ಸದಸ್ಯ, ಕಸಾಪ, ಚಾಮರಾಜನಗರ

ಜಿಲ್ಲೆಯಲ್ಲಿ ಬಹುತೇಕರು ರಾಜ್ಯಾಧ್ಯಕ್ಷರಿಗೆ ವಿರೋಧವನ್ನು ಮಾಡಿದ್ದರು. ಜಿಲ್ಲಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ತಪ್ಪು ಏನು ಮಾಡಿದ್ದರೇ ಎಂಬುದನ್ನು ಖಂಡಿಸುವುದು ಮುಖ್ಯವಾಗುತ್ತದೆ.ಈ ನಿಟ್ಟಿನಲ್ಲಿ ಮಹೇಶ್ ಜೋಶಿ ಅವರ ವಿರುದ್ಧ ಜಿಲ್ಲೆಯಲ್ಲಿ ಧ್ವನಿ ಎದ್ದಿದೆ.

-ರವಿಕುಮಾರ್ ಮಾದಾಪುರ, ಉಪಾಧ್ಯಕ್ಷ, ಕಸಾಪ, ಚಾಮರಾಜನಗರ