ರಾಮನಗರ: ಸತ್ತವರ ಹೆಸರಲ್ಲಿ ಪಿಂಚಣಿ ಪಡೆಯುವುದು ಸಾಮಾನ್ಯ ಎನ್ನುವಂತೆ ಆಗಿದೆ. ಇಂಥವರನ್ನು ಪತ್ತೆ ಹಚ್ಚುವುದು ಸರ್ಕಾರಕ್ಕೆ ಸವಾಲಿನ ಕೆಲಸ, ಈ ಕೆಲಸಕ್ಕೆ ನವೋದಯ ತಂತ್ರಾಂಶ ನೆರವಿಗೆ ಬಂದಿದ್ದು, ಜಿಲ್ಲೆಯಲ್ಲಿ 12,501 ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟ ತಪ್ಪಿದೆ.
ಮೈತ್ರಿ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಸೇರಿ ಇನ್ನಿತರ ಪಿಂಚಣಿ ಸೇವೆಗಳಿಂದ ಸುಮಾರು 4 ಲಕ್ಷ ಮಂದಿ ಲಾಭ ಪಡೆಯುತ್ತಿದ್ದಾರೆ. 500 ರೂ.ಗಳಿಂದ 2 ಸಾವಿರ ರೂ.ವರೆಗೂ ಮಾಸಿಕ ಹಣ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇವರಲ್ಲಿ ಹಲವರು ಮೃತಪಟ್ಟಿದ್ದರೂ ಅವರ ಹೆಸರಲ್ಲಿ ಪಿಂಚಣಿ ಸಂದಾಯವಾಗುತ್ತಲೇ ಇತ್ತು. ಇವರನ್ನು ಪತ್ತೆ ಹಚ್ಚುವ ಸಲುವಾಗಿ ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿದ್ದ ನವೋದಯ ಆ್ಯಪ್ ಮೂಲಕ ಜಿಲ್ಲಾಡಳಿತ ಸರ್ವೇ ಕೆಲಸ ಆರಂಭಿಸಿದ ನಂತರ ಮಾಹಿತಿ ಪತ್ತೆಯಾಗಿದ್ದು, ಇದರಲ್ಲಿ 12,501 ಮಂದಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ದಂಧೆ ನಡೆಯುತ್ತಿದ್ದದ್ದು ಹೀಗೆ: ಮಾಸಾಶನ ಹಣ ನೇರವಾಗಿ ಲಾನುಭವಿ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ ಲಾನುಭವಿಗಳು ಮೃತಪಟ್ಟ ಬಳಿಕ ಅವರ ಮಾಹಿತಿಯನ್ನು ಕುಟುಂಬ ಸದಸ್ಯರು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸುತ್ತಿಲ್ಲ. ಬದಲಿಗೆ ಅವರ ಖಾತೆಗೆ ಜಮೆಯಾಗುತ್ತಿರುವ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಂದು ಸೌಲಭ್ಯಗಳು ನಗದು ರೂಪದಲ್ಲಿ ಸಂದಾಯಗೊಳ್ಳುತ್ತಿವೆ. ಇಲ್ಲಿಯೂ ಯಾಮಾರಿಸಿ, ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಅಕ್ರಮ ಪತ್ತೆಯಾಗಲಿದೆ: ನವೋದಯ ಆ್ಯಪ್ ಮೂಲಕ ಕಂದಾಯ ಇಲಾಖೆ ನೌಕರರು ಪಿಂಚಣಿದಾರರ ಮನೆಗಳ ಸರ್ವೇ ನಡೆಸಬೇಕು. ಲಾನುಭವಿಗಳ ಫೋಟೊ ತೆಗೆದು, ಆ್ಯಪ್‌ನಲ್ಲಿ ನಮೂದಿಸಬೇಕು. ಜತೆಗೆ, ಅವರ ಇರುವಿಕೆ ಧೃಢೀಕರಿಸಬೇಕು. ವಯಸ್ಸು, ಪಿಂಚಣಿ ಮಾದರಿ, ಹೀಗೆ ಕೆಲ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಈಗ ಶೇ.75 ಸರ್ವೇ ನಡೆದಿದೆ. ಬಾಕಿ ಉಳಿದ ಶೇ.25 ಸರ್ವೇಯೊಳಗೆ ಕನಿಷ್ಠ 4ರಿಂದ 5 ಸಾವಿರ ಅಕ್ರಮಗಳು ಪತ್ತೆಯಾಗಲಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಸರ್ಕಾರಕ್ಕೆ ಲಾಭ: 12,501 ಪಿಂಚಣಿಗಳನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರಿಂದ ಕನಿಷ್ಠ 1.30 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಉಳಿಯಲಿದೆ ಎಂದು ಅಂದಾಜಿಸಲಾಗಿದೆ. ಇದೇ ಮಾದರಿಯಲ್ಲಿ ಎಲ್ಲ ಜಿಲ್ಲೆಗಳು ಸೇರಿ, 10 ಲಕ್ಷದಷ್ಟು ಪಿಂಚಣಿಗಳು ಅಕ್ರಮದಿಂದ ಕೂಡಿರಬಹುದು ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ 12501 ಪಿಂಚಣಿದಾರರು ಮೃತಪಟ್ಟಿರುವುದು ಪತ್ತೆ ಆಗಿದೆ. ಇವುಗಳ ಪಿಂಚಣಿ ರದ್ದುಗೊಳಿಸಲಾಗಿದೆ. ನವೋದಯ ಆ್ಯಪ್ ಮೂಲಕ ಪಿಂಚಣಿದಾರರ ಶೇ.75 ಸರ್ವೇ ಪೂರ್ಣಗೊಂಡಿದೆ. ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ, ರಾಮನಗರ