ಹಾಸನ: ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ 2024 ಜ.1ಕ್ಕೆ ಅನ್ವಯವಾಗುವಂತೆ ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಕಾರ್ಯವು ಪ್ರಗತಿಯಲ್ಲಿದ್ದು, ಆಯೋಗದ ವೇಳಾಪಟ್ಟಿಯಂತೆ ಅ.27ರಂದು ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಪಕ್ಷಗಳ ಹಾಗೂ ನೋಂದಾಯಿತಿ ಪಕ್ಷಗಳ ಪ್ರತಿನಿಧಿಗಳಿಗೆ ಕರಡು ಮತದಾರರ ಪಟ್ಟಿಯನ್ನು ನೀಡಿದ ನಂತರ ಮಾತನಾಡಿದ ಅವರು, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು, ಮೃತಪಟ್ಟವರು, ಕನಿಷ್ಠ 6 ತಿಂಗಳಿಂದ ಕಾಣೆಯಾದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದರ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರಲ್ಲದೆ, ಯುವ ಮತದಾರರ ನೋಂದಣಿಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು, ತಿದ್ದುಪಡಿ ಮಾಡಲು, ಹೆಸರನ್ನು ತೆಗೆದು ಹಾಕಲು ಅಥವಾ ವರ್ಗಾವಣೆ ಮಾಡಲು ಸಂಬಂಧಪಟ್ಟ ಮತಗಟ್ಟೆ ಹಂತದ ಅಧಿಕಾರಿಗಳು ಅಥವಾ ತಾಲೂಕು ಕಚೇರಿಯಲ್ಲಿ ಅವಶ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅ.27ರಿಂದ ಡಿ.9 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಲ್ಲಿಸಬಹುದಾಗಿದೆ. ಅಲ್ಲದೇ ಸಾರ್ವಜನಿಕರು ವೋಟ್ ಹೆಲ್ಪ್ ಲೈನ್ ಅಥವಾ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.
ನ.18 ಮತ್ತು 19ರಂದು ಹಾಗೂ ಡಿ.2 ಮತ್ತು 3ರಂದು ವಿಶೇಷ ಅಂದೋಲನ ನಡೆಸಲಾಗುವುದು. 2024ರ ಜ.1ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 1997 ಮತಗಟ್ಟೆಗಳಿದ್ದು, ಪ್ರಸ್ತುತ ಮತದಾರರ ಪಟ್ಟಿಗಳ ಪರಿಷ್ಕರಣೆಯ ಹಂತದಲ್ಲಿ ಮತಗಟ್ಟೆಗಳ ರ‌್ಯಾಷನಲೈಸೇಷನ್ ಪ್ರಕ್ರಿಯೆಯ ನಂತರ ಜಿಲ್ಲೆಯಲ್ಲಿ 29 ಮತಗಟ್ಟೆಗಳನ್ನು ವಿಲೀನಗೊಳಿಸಿ ಒಟ್ಟು 1968 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7,50,891 ಪುರುಷರು ಹಾಗೂ 7,52,784 ಮಹಿಳೆಯರು ಸೇರಿದಂತೆ ಒಟ್ಟು 15,03,675 ಮತದಾರರಿದ್ದಾರೆ ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗವು ಪ್ರಜಾಪ್ರಾತಿನಿಧ್ಯ ಕಾಯಿದೆ 1950 ಕಾಲಂ 14 ಕ್ಕೆ ತಿದ್ದುಪಡಿ ತರಲಾಗಿದ್ದು, ಅದರಂತೆ ಪ್ರಸ್ತುತ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಪರಿಷ್ಕರಣೆಯ ಅರ್ಹತಾ ದಿನಾಂಕವು ಪ್ರತಿ ವರ್ಷದ ಜನವರಿ 1ನೇ ತಾರೀಖಿನ ಬದಲಾಗಿ, ಆಯಾ ವರ್ಷದ ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ದಿನಾಂಕಕ್ಕೆ ನಿಗದಿಪಡಿಸಿ, ಈ ಸಮಯದಲ್ಲಿ 18 ವರ್ಷ ಪೂರ್ಣಗೊಳ್ಳುವ ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ದೃಷ್ಟಿಯಿಂದ ಈ ತಿದ್ದುಪಡಿಯನ್ನು ತರಲಾಗಿದೆ ಎಂದರು.
ಪ್ರಜಾಪ್ರಾತಿನಿಧ್ಯ ಕಾಯಿದೆ 1950ಕ್ಕೆ ತಿದ್ದುಪಡಿಗಳನ್ನು ಮಾಡಿದ್ದು, ಅದರನ್ವಯ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ನಮೂನೆಗಳಾದ 6, 6ಬಿ, 7, 8, 8ಎ ಗಳ ಬದಲಾಗಿ ನೂತನ ನಮೂನೆಗಳಾದ 6, 6ಎ, 6ಬಿ, 7 ಮತ್ತು 8 ಗಳನ್ನು ಜಾರಿಗೆ ತರಲಾಗಿದೆ. ಹೊಸದಾಗಿ ಪ್ರಾರಂಭಿಸಿರುವ ನಮೂನೆ 6ಅನ್ನು ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಮಾತ್ರ ಉಪಯೋಗಿಸತಕ್ಕದ್ದು ಹಾಗೂ ಇದರೊಂದಿಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು.
ಹೊಸದಾಗಿ ಪ್ರಾರಂಭಿಸಿರುವ ನಮೂನೆ 6ಬಿ ಅನ್ನು ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಮತದಾರರ ಆಧಾರ್ ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ನಮೂದು ಮಾಡಲು ಮಾತ್ರ ಉಪಯೋಗಿಸಬಹುದಾಗಿದೆ. ನಮೂನೆ 7ರಲ್ಲಿ ಕೆಲವು ಮಾರ್ಪಾಡು ಮಾಡಲಾಗಿದ್ದು, ಇದರಂತೆ ವಿಧಾನ-1, ಆಕ್ಷೇಪಣೆದಾರರು ಅಥವಾ ಆಕ್ಷೇಪಿತ ವ್ಯಕ್ತಿಯ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು. ವಿಧಾನ-2, ಸ್ವಯಂ ಪ್ರೇರಿತರಾಗಿ ಮತದಾರರ ಪಟ್ಟಿಯಿಂದ ಕೈಬಿಡಲು ಅರ್ಜಿ ಸಲ್ಲಿಸುವುದು. ನಮೂನೆ 8ರಲ್ಲಿ ಹೆಚ್ಚಿನ ಮಾರ್ಪಾಡುಗಳನ್ನು ಮಾಡಿದ್ದು, ಇದರಂತೆ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ರೀತಿಯ ದೋಷಗಳು, ತಿದ್ದುಪಡಿಗಳು, ಸ್ಥಳ ಬದಲಾವಣೆ, ವಿಧಾನಸಭಾ ಕ್ಷೇತ್ರಗಳ ಬದಲಾವಣೆ ಹಾಗೂ ವಿಕಲಾಂಗ ಚೇತನ ವ್ಯಕ್ತಿಗಳ ಗುರುತಿಸುವ ಕಾರ್ಯಗಳನ್ನು ಈ ನಮೂನೆಯಡಿಯಲ್ಲಿ ತರಲಾಗಿದೆ. ನಮೂನೆ-8ಎ ಅನ್ನು ಮತದಾರರ ಪಟ್ಟಿಯ ಪರಷ್ಕರಣೆ ಕಾರ್ಯದಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.