ಅಶೋಕ ಶೆಟ್ಟರ ಬಾಗಲಕೋಟೆ:
ದೇಶದಲ್ಲಿ ಅತಂತ್ಯ ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಉತ್ಸವವೂ ಒಂದು. ಭಾದ್ರಪದ ಶುಕ್ಲಪಕ್ಷ ಚೌತಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮನೆ ಮನೆಗಳಲ್ಲಿ ವಿಘ್ನವಿನಾಶಕನ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ವಿಜರ್ಸನೆ ಮಾಡುವುದು ಒಂದು ಕಡೆಯಾದರೆ ಮತ್ತೊಂದು ಕಡೆಗೆ ಗಲ್ಲಿ ಗಲ್ಲಿಗಳಲ್ಲಿ ಯುವಕರು ಸೇರಿಕೊಂಡು ಲಂಬೋಧರನ ವಿಗ್ರಹ ಪ್ರತಿಷ್ಠಾಪಿಸಿ ಭರ್ಜರಿಯಾಗಿ ಗಣೇಶ ಚತುರ್ಥಿ ಆಚರಿಸುವುದು ವಾಡಿಕೆ.
ಹೀಗೆ ಸಂಭ್ರಮ, ಸಡಗರದಿಂದ ಆಚರಿಸುವ ಜಿಲ್ಲೆಗಳ ಪೈಕಿ ಬಾಗಲಕೋಟೆ ಜಿಲ್ಲೆಯೂ ಒಂದು. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಒಟ್ಟು ೨೯೪೩ ಸಾರ್ವಜನಿಕ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ವಿವಿಧ ಮಂಡಳಿಗಳು ಸಿದ್ದತೆ ನಡೆಸಿವೆ. ಕಳೆದ ವರ್ಷ ೨೭೦೯ ಕಡೆಗೆ ಸ್ಥಾಪಿಸಲಾಗಿತ್ತು. ಈ ಸಲ ಮತ್ತೆ ೨೩೪ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಪ್ರತಿಷ್ಠಾಪಿಸುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಪರವಾಣಿಗೆ ಪಡೆದುಕೊಂಡಿದ್ದಾರೆ.
ದೇಶದಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಶತಮಾನಗಳ ದೊಡ್ಡ ಇತಿಹಾಸವೇ ಇದ್ದು, ಅದು ಬಾಗಲಕೋಟೆ ಜಿಲ್ಲೆಯಲ್ಲೂ ಶತಮಾನಗಿಂದ ನಡೆದುಕೊಂಡು ಬಂದಿದೆ. ಇನ್ನೂ ಕೆಲವು ಕಡೆಗಳಲ್ಲಿ ೭೦ ರಿಂದ ೮೦ ವರ್ಷಗಳಿಂದಲೂ ನಿರಂತರವಾಗಿ ಸಾರ್ವಜನಿಕ ಗಣೇಶ ವಿಗ್ರಹ ಸ್ಥಾಪಿಸಿ ಹಬ್ಬ ಆಚರಿಸಿಕೊಂಡು ಬರಲಾಗಿದೆ.
ಬಾಗಲಕೋಟೆ ನಗರದಲ್ಲಿ ಶಹರ ಗಜಾನನ ಉತ್ಸವ ಮಂಡಳಿ ವತಿಯಿಂದ ಕಳೆದ ೭೩ ವರ್ಷಗಳಿಂದ ನಿರಂತರವಾಗಿ ಗಣೇಶೋತ್ಸವ ಮಾಡುತ್ತ ಬಂದಿದ್ದಾರೆ. ಇದರ ವಿಶೇಷತೆ ಎಂದರೆ ಆರಂಭದಿಂದ ಇಲ್ಲಿವರೆಗೂ ಒಂದು ಸಲವೂ ಕೂಡ ಪಿಒಪಿ ಗಣೇಶ ಮೂರ್ತಿ ಇಟ್ಟಿಲ್ಲ. ಪ್ರತಿ ವರ್ಷವೂ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸುತ್ತ ಬಂದಿದ್ದಾರೆ. ಜೊತೆಗೆ ಕಳೆದ ೫೬ ವರ್ಷಗಳಿಂದ ಬಾಗಲಕೋಟೆ ನಗರದ ಶಿವಪ್ಪ ಕರಿಗಾರ ಎನ್ನುವವರು ಈ ಗಣೇಶ ಮೂರ್ತಿ ತಯಾರು ಮಾಡುತ್ತ ಬಂದಿರುವುದು ಗಮನಾರ್ಹ ಸಂಗತಿ.
ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳನ್ನು ಒಂದು ದಿನದಿಂದ ೧೩ ದಿನಗಳ ವರೆಗೂ ವಿಸರ್ಜನೆ ಮಾಡಲಾಗುತ್ತಿದೆ. ಮೊದಲ ದಿನ ೧೬೪ ಕಡೆಗೆ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ. ೧೬೨೯ ಗಣೇಶ ವಿಗ್ರಹಗಳನ್ನು ೫ನೇ ದಿನಕ್ಕೆ , ೬೧೯ ಮೂರ್ತಿಗಳನ್ನು ೭ನೇ ದಿನಕ್ಕೆ, ೧೯೬ ವಿನಾಯಕ ಮೂರ್ತಿಗಳನ್ನು ೯ನೇ ದಿನಕ್ಕೆ, ೧೨೧ ಮೂರ್ತಿ ೧೧ನೇ ದಿನಕ್ಕೆ ಹಾಗೂ ೧೧ ಕಡೆಗೆ ೧೩ನೇ ದಿನಕ್ಕೆ ವಿಜರ್ಸನೆ ಮಾಡಲಾಗುತ್ತದೆ.
ಸೂಕ್ಷ್ಮ ಅತೀ ಸೂಕ್ಷ್ಮ
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಪ್ರತಿಷ್ಠಾಪನೆ ಆಗಲಿರುವ ೨೯೪೩ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಪೈಕಿ ೯೫ ಕಡೆ ಅತೀಸೂಕ್ಷ÷್ಮ, ೩೯೬ ಸೂಕ್ಷ÷್ಮ ಹಾಗೂ ೨೪೫೨ ಕಡೆ ಸಾಧಾರಣ ಪ್ರದೇಶ ಎಂದು ಪೊಲೀಸರು ಗುರುತಿಸಿದ್ದಾರೆ. ಒಟ್ಟು ೨೦ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಗಣೇಶ ವಿಗ್ರಹಗಳು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.