ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ೨೬೫೦೦೦ ಹೆಕ್ಟೇರ್ ಬಿತ್ತನೆ ಕ್ಷೇತ್ರ ಗುರಿಹೊಂದಿದ್ದು, ಈ ಪೈಕಿ ಇಲ್ಲಿಯವರೆಗೆ ೨೧೧೨೫೯ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಎಲ್.ಐ.ರೂಡಗಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಬಿತ್ತನೆಯಾದ ಪ್ರದೇಶದಲ್ಲಿ ಮೆಕ್ಕೆಜೋಳ ೪೧೩೩೬ ಹೆಕ್ಟೇರ್, ಸಜ್ಜೆ ೧೧೪೩೮ ಹೆಕ್ಟೇರ್, ತೊಗರಿ ೧೮೭೯೮ ಹೆಕ್ಟೇರ್, ಹೆಸರು ೬೮೪೬ ಹೆಕ್ಟೇರ್, ಸೂರ್ಯಕಾಂತಿ ೮೫೧೫ ಹೆಕ್ಟೇರ್ ಹಾಗೂ ಕಬ್ಬು ೧೧೯೧೨೨ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ಮಾಹೆಯಿಂದ ಆ.೧೫ ರವರೆಗೆ ೧೮೬.೪ ಮಿಮಿ ಸಾಮಾನ್ಯ ಮಳೆ ಆಗಬೇಕಿದ್ದು, ೧೩೬.೦ ಮಿಮಿ ಮಳೆಯಾಗಿದೆ. ಶೇ ೨೭% ಮಳೆ ಕೊರತೆ ಆಗಿದೆ ಎಂದರು.
ಕಳೆದ ವರ್ಷ ಇದೇ ಅವಽಯಲ್ಲಿ ೨೭೯.೯ ಮಿಮಿ ಮಳೆ ಬಂದಿದ್ದು, ಪೂರ್ವ ಮುಂಗಾರು * ಮುಂಗಾರು ಜೂನ್ ಮಾಹೆಯಲ್ಲಿ ಮಳೆಯು ಎಲ್ಲಾ ತಾಲೂಕುಗಳಲ್ಲಿ ಸಮರ್ಪಕವಾಗದಿರುವುದರಿಂದ ಬಿತ್ತನೆ ಕುಂಠಿತವಾಗಿರುತ್ತದೆ. ತದನಂತರ ಜುಲೈ ತಿಂಗಳಲ್ಲಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಳೆಯಾಗಿ ಬಿತ್ತನೆ ಪ್ರಾರಂಭವಾಗಿರುತ್ತದೆ. ಮುಂಗಾರು ಹಂಗಾಮಿನ ಮುಖ್ಯ ದ್ವಿದಳ ಧಾನ್ಯ ಬೆಳೆಗಳಾದ ಹೆಸರು ಮತ್ತು ಉದ್ದು, ಏಕದಳ ಧಾನ್ಯ ಸಜ್ಜೆ ಹಾಗೂ ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ ಮತ್ತು ಸೋಯಾ ಅವರೆಯು ಗುರಿಗೆ ತಕ್ಕಂತೆ ಬಿತ್ತನೆಯಾಗಿರುವುದಿಲ್ಲ.
ಇಂತಹ ಕ್ಷೇತ್ರಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆ ಚೆನ್ನಾಗಿ ಆದರೆ ಆ ಪ್ರದೇಶವು ಜೋಳ ಮತ್ತು ಕಡಲೆ ಬಿತ್ತನೆಯಾಗುತ್ತದೆ. ಆದ್ದರಿಂದ ರೈತರು ಸಮಪರ್ಕ ಮಣ್ಣಿನ ತೇವಾಂಶ ನೋಡಿ ಬಿತ್ತನೆ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪರ್ಯಾಯ ಬೆಳೆಯಾಗಿ ಆಗಷ್ಟ ಪಾಕ್ಷಿಕದಲ್ಲಿ ನೀರಾವರಿ ಅಥವಾ ಮಳೆಯಾದ ಸಮಯದಲ್ಲಿ ಸೂರ್ಯಕಾಂತಿ, ಹುರಳಿ, ನವಣೆ, ಎಳ್ಳು ಮತ್ತು ಗುರೆಳ್ಳು ಬೆಳೆಯಲು ಸೂಕ್ತಕಾಲವಾಗಿರುವುದರಿಂದ ರೈತರು ಬಿತ್ತನೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.