ಹಾಸನ: ಜಿಲ್ಲೆಯಲ್ಲಿ, ವಿಶೇಷವಾಗಿ ಯುವಕರು ಮತ್ತು ಮಕ್ಕಳಲ್ಲಿ, ಹೃದಯಾಘಾತ ಪ್ರಕರಣಗಳ ಏರಿಕೆ ಆತಂಕ ಮೂಡಿಸಿದೆ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ 507 ಹೃದಯಾಘಾತ ಪ್ರಕರಣಗಳು ವರದಿಯಾಗಿದ್ದು, 140 ಸಾವು ಸಂಭವಿಸಿವೆ. ಈ ಒಂದು ತಿಂಗಳಲ್ಲಿ 13 ಜನ ಮೃತಪಟ್ಟಿರುವುದು ಅದರಲ್ಲೂ 40 ವರ್ಷದೊಳಗಿನವೇ ಸಾವನ್ನಪ್ಪಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಹಾರ್ಟ್‌ಅಟ್ಯಾಕ್‌ನಿಂದ ಅಕಾಲಿಕ ಮರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದ್ದು ಇದನ್ನು ಕಾರಣ ಹಾಗೂ ಪರಿಹಾರದ ಬಗ್ಗೆ ಸರ್ಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹೀಗೆ ಸರಣಿ ಸಾವಾಗುತ್ತಿರುವುದಕ್ಕೆ ಕೋವಿಡ್ ಲಸಿಕೆಯೇ ಕಾರಣ ಎಂದು ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿತ್ತು. ಹೀಗಾಗಿ ರಾಜಾರಾಂ ಎನ್ನುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಆಧರಿಸಿ ಸಿಎಂ ಸಿದ್ದರಾಮಯ್ಯ ಅವರು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. ಬಳಿಕ 10 ನುರಿತ ವೈದ್ಯರ ತಂಡ ಯುವಕರ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳ ಕಾಲ ಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.
ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ಆದರೆ ಸರಿಯಾದ ರೀತಿ ಆರೋಗ್ಯ ಕ್ರಮಗಳನ್ನು ಅನುಸರಿಸುವುದು ಮತ್ತು ಉತ್ತಮ ಆಹಾರ ಪದಾರ್ಥ ಸೇವನೆ, ವ್ಯಾಯಾಮ, ಮತ್ತು ಪ್ರತಿ ವರ್ಷವೂ ಕೂಡ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು, ಎದೆ ನೋವು ಕಾಣಿಸಿಕೊಂಡ ತಕ್ಷಣವೇ ಅದನ್ನು ನಿರ್ಲಕ್ಷೃ ಮಾಡದೆ ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಇಸಿಜಿ ಹಾಗೂ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸಲಹೆ ನೀಡುತ್ತಾರೆ.
ಅದು ಅಲ್ಲದೇ ಆರೋಗ್ಯ ಇಲಾಖೆಯಿಂದ ಹೃದಯಾಘಾತದ ಬಗ್ಗೆ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಅವರಲ್ಲಿ ಯಾವುದೇ ದುಷ್ಟ ಚಟಗಳನ್ನ ಬೆಳೆಸಿಕೊಳ್ಳದಂತೆ ಮತ್ತು ಸರಿಯಾದ ರೀತಿ ಜೀವನಶೈಲಿ ನಡೆಸಿಕೊಳ್ಳುವಂತೆ ಕಿವಿಮಾತು ಹೇಳಲಾಗುತ್ತಿದೆ.
ಸೇವಿಸುವ ಆಹಾರದ ಬಗ್ಗೆ ಪರಿಶೀಲನೆಯಾಗಲಿ
ಈ ಹಿಂದೆ ವಯಸ್ಸಾದ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತ ಇಂದು ಎಲ್ಲರ ಮನೆ ಬಾಗಿಲಿಗೆ ನಿಂತಂತಿದೆ. ಇದಕ್ಕೆ ಇಂದು ನಾವು ಸೇವಿಸುವ ಆಹಾರ ಕೂಡ ಒಂದು ಕಾರಣವಾಗಿರಬಹುದು ಎಂದು ಹೇಳುತ್ತಾರೆ ಯೋಗ ತರಬೇತುದಾರ ಚೇತನ್ ಗುರೂಜಿ. ಹಿಂದೆ ಗಾಣದಿಂದ ತೆಗೆದ ಎಣ್ಣೆಯನ್ನು ಅಡುಗೆಯಲ್ಲಿ ಬಳಸುತ್ತಿದ್ದೆವು, ಮನೆಯಲ್ಲಿಯೇ ಅಗತ್ಯಕ್ಕೆ ತಕ್ಕಂತೆ ಮಸಾಲ ಪದಾರ್ಥಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇಂದು ಆಹಾರದಲ್ಲಿ ವಿವಿಧ ಕಂಪನಿಗಳ ಪ್ಯಾಕೆಟ್ ಎಣ್ಣೆ ಬಳಸುತ್ತಿದ್ದೇವೆ. ಇದು ಮನುಷ್ಯರ ಆರೋಗ್ಯದ ಮೇಲೆ ಎಷ್ಟು ಮಾರಣಾಂತಿಕ ಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಹಾಗೆಯೇ ಇಂದು ನಾವು ಬಳಸುವ ಎಲ್ಲ ಮಸಾಲೆಗಳು ಪ್ಯಾಕೆಟ್‌ನಲ್ಲಿಯೇ ಬರುತ್ತಿವೆ. ಇಂದು ಎಲ್ಲರೂ ಇದನ್ನೇ ಬಳಸುತ್ತಿದ್ದಾರೆ. ದೇಸಿ ತಳಿಯ ಹಸುವಿನ ಹಾಲಿನ ಬದಲಿಗೆ ವಿದೇಶಿ ತಳಿಯ ಹಸುಗಳು ಹಾಲನ್ನು ಸೇವಿಸುತ್ತಿದ್ದೇವೆ. ಈ ಬಗ್ಗೆ ಆಹಾರ ಇಲಾಖೆ, ಆಹಾರ ಗುಣಮಟ್ಟ ಸಂಶೋಧನಾ ಇಲಾಖೆಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಾರೆ.
ಸಾವನ್ನಪ್ಪಿದ್ದ 13 ಜನರ ಮಾಹಿತಿ
ಒಂದೇ ತಿಂಗಳಲ್ಲಿ 13 ಮಂದಿ ಹೃದಯಾಘಾತಕ್ಕೆ ಸಾವಾಗಿರೋದು ಆತಂಕ ಹೆಚ್ಚಿಸಿತ್ತು. ಹಾಸನ ನಗರದ ಸತ್ಯಮಂಗಲ ಬಡಾವಣೆಯ ಚೇತನ್ (35), ಬೇಲೂರು ಪಟ್ಟಣದ ನಿಶಾದ್ ಅಹ್ಮದ್ (35), ಹೊಳೆನರಸೀಪುರ ಪಟ್ಟಣದ ಸಂಧ್ಯಾ (20), ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಅಭಿಷೇಕ್ (19), ಹಾಸನ ತಾಲೂಕಿನ ಕೆಲವತ್ತಿ ಗ್ರಾಮದ ಕವನಾ(20), ಹೊಳೆನರಸೀಪುರ ಪಟ್ಟಣದ ನಿಶಾಂತ್ (20), ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮದ ಬಳಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಾರಿಗೆ ಇಲಾಖೆ ನೌಕರ ಬಿ.ಆರ್.ನಾಗಪ್ಪ (55), ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ (58), ಹಾಸನ ಹೊರವಲಯದ ರಾಜಘಟ್ಟದ ದೇವರಾಜ್ (43), ಹಾಸನ ನಗರದ ತೆಲುಗರ ಬೀದಿಯ ಸತೀಶ್ (57), ಹಾಸನ ತಾಲೂಕಿನ ದೊಡ್ಡಪುರ ಗ್ರಾಮದ ಕಾಂತರಾಜು (51), ಚನ್ನರಾಯಪಟ್ಟಣ ತಾಲೂಕಿನ ಕೆ.ಎಂ ಯೋಗೇಶ್ (32) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಧೂಮಪಾನ, ಮದ್ಯಪಾನ, ಕುಟುಂಬದಲ್ಲಿನ ಅನುವಂಶಿಯ ಕಾಯಿಲೆಗಳು ಹೃದಯಾಘಾತಕ್ಕೆ ಕಾರಣಗಳಾಗಬಹುದು. ಹಾಗೆಯೇ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಾ ಇರುವುದು, ಸರಿಯಾದ ರೀತಿಯಲ್ಲಿ ಜೀವನ ಶೈಲಿ ಅಳವಡಿಸಿಕೊಳ್ಳದಿರುವದು ಹಾಗೂ ಅತಿಯಾದ ಜಂಕ್ ಫುಡ್ ಸೇವನೆಯಿಂದಲೂ ಕೊಬ್ಬು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗಬಹುದು. ಹೃದಯಾಘಾತದಿಂದ ದೂರವಿರಲು ಪ್ರತಿನಿತ್ಯ ವ್ಯಾಯಾಮ ಯೋಗ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಆರೋಗ್ಯಕರ ಆಹಾರ ಸೇವಿಸಬೇಕು ಎಂದು ಡಿಎಚ್ಒ ಡಾ.ಅನಿಲ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್ ಲಸಿಕೆ ನೀಡಿ ಈಗಾಗಲೇ ಎರಡು ವರ್ಷಗಳಾಗಿವೆ. ಸದ್ಯಕ್ಕೆ ಇದರ ಬಗ್ಗೆ ಯಾವುದೇ ನಿರ್ದಿಷ್ಟವಾದ ಅಥವಾ ಅಧಿಕೃತ ಮಾಹಿತಿಯಿಲ್ಲ. ಅನಗತ್ಯ ಗೊಂದಲಗಳಿಗೆ ದಾರಿ ಮಾಡಿಕೊಡುವುದು ಬೇಡ. ರೋಗನಿರೋಧಕ ಕ್ರಮಗಳ ಬಗ್ಗೆ ನಮ್ಮ ಸಮುದಾಯಗಳಿಗೆ ನಾವು ಶಿಕ್ಷಣ ನೀಡಬೇಕು. ನಾಗರಿಕರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಯೋಗ, ಧ್ಯಾನ, ಪೌಷ್ಟಿಕ ಆಹಾರ, ತಜ್ಞರ ವೈದ್ಯಕೀಯ ಸಲಹೆ ಪಡೆಯುವುದು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.