ಜಿಲ್ಲೆ

ಜಿಲ್ಲೆಯಲ್ಲಿ ಸೌಲಭ್ಯಗಳ ಕೊರತೆ

ಬಳ್ಳಾರಿ : ಜಿಲ್ಲೆಯಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಹೆಚ್ಚಿಗೆ ಅರಿವು ಮೂಡಿಸಿ, ಹಾನಿಯಾದ ಕೂಡಲೇ ಕಂಪನಿಗಳಿಂದ ಪರಿಹಾರ ಒದಗಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಪೂರೈಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಭೇಟಿ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ನೀಡಬೇಕು ಎಂದು ಸೂಚಿಸಿದರು. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಕೆಲವೇ ದಿನಗಳಲ್ಲಿ ಭರ್ತಿ ಮಾಡಲಾಗುವುದು. ಅಲ್ಲಿಯವರೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಿ ಎಂದರು. ಜಿಲ್ಲೆಯ ಜಿಂದಾಲ್, ಕಾರ್ಖಾನೆಗಳ, ರಸ್ತೆಗಳ ಬದಿ, ಕೌಂಪಂಡ್‌ಗಳು ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಲೇ ಔಟ್‌ಗಳಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿದ ಹಾಗೂ ಮಾನವರಿಗೆ ಹಾನಿಕಾರಕವಾಗಿರುವ ಕೋನ ಕಾರ್ಪಸ್ ಸಸಿ ಬೆಳೆಸುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲ ಎಂದು ಕಂಪ್ಲಿ ಶಾಸಕ ಜೆ. ಎನ್. ಗಣೇಶ ಸಭೆಯಲ್ಲಿ ಪ್ರಸ್ತಾಪಿಸಿದರು. ಬೆಳೆದ ಸಸಿಗಳನ್ನು ನಾಶಪಡಿಸುವಂತೆ ಲೇ ಔಟ್ ಮಾಲೀಕರಿಗೆ ಸೂಚಿಸಲು ಕ್ರಮವಹಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿಲ್ಲೆಯ ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯತ್ತಿರುವ ರೋಗಿಗಳು ನರಕಯಾತನೆ ಪಡುತ್ತಿದ್ದು , ಇದೊಂದು ದೊಡ್ಡ ದುರಂತ. ಬಿಮ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ವೈದ್ಯರು, ಖಾಸಗಿ ಆಸ್ಪತ್ರೆಗಳು ನಡೆಸುತ್ತಿದ್ದು, ನಿಗದಿತ ವೇಳೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ರೋಗಿಗಳು ಸಂಕಷ್ಟ ಪಡುವಂತೆಯಾಗಿದೆ. ರೋಗಿಗಳಿಗೆ ಪ್ರತಿಯೊಂದು ಔಷಧಿಗಳನ್ನು ಖಾಸಗಿ ಮೆಡಿಕಲ್ ಔಷಧಿಗಳ ಶಾಪ್‌ಗಳಿಗೆ ಬರೆದು ಕೊಡುತ್ತಿದ್ದಾರೆ. ಇದರಿಂದ ಬಿಮ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗದೆ, ಸಾರ್ವಜನಿಕರು ಲಕ್ಷಾಂತರ ರೂ. ವ್ಯಯಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಗರ ಶಾಸಕ ನಾರಾ ಭರತರೆಡ್ಡಿ ಬಿಮ್ಸ್ ನಿರ್ದೇಶಕರ ಮೇಲೆ ಕೋಪಗೊಂಡರು. ಬಿಮ್ಸ್‌ನಲ್ಲಿ ಸಾಮಾನ್ಯವಾಗಿ ಕೆಲ ಔಷಧಿಗಳ ಕೊರತೆಯಿದೆ. ಅದಕ್ಕೆ, ಮುಖ್ಯವಾಗಿ ಸರ್ಕಾರ ಟೆಂಡರ್ ಕರೆಯುವುದು ವಿಳಂಬವಾಗುತ್ತಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಸಭೆಯಲ್ಲಿ ಸಮರ್ಥಿಸಿಕೊಂಡರು. ಬಿಮ್ಸ್ ನಿರ್ದೇಶಕ ಸಭೆಗೆ ಗೈರಾಗಿದ್ದರಿಂದ ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೆ ನೆಪವೊಡ್ಡಿ ಗೈರಾಗಿದ್ದಾರೆ ಅಂದರೆ, ಅವರಿಗೆ ಯಾವುದೇ ಭಯ, ಭಕ್ತಿ ಇಲ್ಲ ಎಂದರ್ಥ ಆಯಿತು ನಿರ್ದೇಶಕರ ಮೇಲೆ ನೋಟಿಸ್ ಜಾರಿ ಮಾಡಿ ಎಂದು ಡಿಸಿ ಅವರಿಗೆ, ಸಚಿವ ಜಮೀರ್ ಅಹ್ಮದ್ ಆದೇಶಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗಣನೀಯವಾಗಿ ಕುಸಿದಿದೆ. ಸಂಬಂಧಪಟ್ಟ ಅಧಿಕಾರಿಗಳು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶ್ರಮವಹಿಸಬೇಕು. ಅಲ್ಲದೆ, ಡಿಸಿ, ಡಿಡಿಪಿಐ ಅಧಿಕಾರಿಗಳು ಶಾಲೆಗಳಿಗೆ ಅನರೀಕ್ಷಿತ ಭೇಟಿ ನೀಡಿ ಶಾಲಾ ಭೋಧನಾ ಕಲಿಕಾ ಮಟ್ಟ, ಶೌಚಾಲಯ, ಊಟ ಹಾಗೂ ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಬೇಕು. ಅಲ್ಲದೆ, ದುಸ್ಥಿತಿಯಲ್ಲಿರುವ ಶಾಲೆಗಳನ್ನು ಪಟ್ಟಿ ಮಾಹಿತಿ ನೀಡಿ. ಅನುದಾನಕ್ಕೆ ಕಾಯದೆ ವಿವಿಧ ಯೋಜನೆಗಳಲ್ಲಿ ದುರಸ್ತಿಗೊಳಿಸಬೇಕು. ಕೇವಲ ಕಚೇರಿಗಳಲ್ಲಿ ಕುಳಿತುಕೊಂಡು ಕೆಲಸ ಮಾಡಿದರೆ ಸಾಲದು, ವಿವಿಧ ಕಡೆ ಭೇಟಿ ನೀಡಿ ಕ್ರಮವಹಿಸಿ ಎಂದು ಅಧಿಕಾರಿಗಳಿ ಸಚಿವರು ಸೂಚಿಸಿದರು. ಜಿಲ್ಲೆಯ ಕುರುಗೋಡಿನಲ್ಲಿ ನೂತನ ನವೋದಯ ಶಾಲೆ ನಿರ್ಮಾಣ ಮಾಡಲು ಸ್ಥಳ ನೀಡುವುದಾಗಿ ಶಾಸಕ ಗಣೇಶ ಭರವಸೆ ಹೇಳಿದರು.
ಜಿಲ್ಲೆಯ ಕೆಎಂಎಫ್ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಲೀ. 1.50 ರೂ. ಕಡಿಮೆ ಮಾಡುವುದಾಗಿ ಏಕೆ ಆದೇಶ ಹೊರಡಿಸಲಾಗಿದ್ದು, ರಾಜ್ಯದ ಎಲ್ಲ ಕೆಎಂಎಫ್ ಒಕ್ಕೂಟಗಳು ಲಾಭದಲ್ಲಿವೆ, ಇಲ್ಲಿ ಮಾತ್ರ ಏಕೆ ದರ ಕಡಿತ ಮಾಡಲಾಗಿದೆ ಎಂದು ಪ್ರಶ್ನಿಸಿದರು. ರಾಬಕೊವಿ ಒಕ್ಕೂಟವು ಕಳೆದ ಮಾರ್ಚ್ ತಿಂಗಳಿನಿಂದ 7. 50 ಕೋಟಿ ರೂ. ನಷ್ಟದಲ್ಲಿದೆ, ಆದ್ದರಿಂದ ಹಾಲಿನ ದರ ಕಡಿತ ಮಾಡಲಾಗಿದೆ ಎಂದು ಕೆಎಂಎಫ್ ಒಕ್ಕೂಟ ಅಧಿಕಾರಿ ಉತ್ತರಿಸಿದರು. ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ, ಪಡಿತರ ಚೀಟಿ ಸೌಲಭ್ಯ, ಆರೋಗ್ಯ ಇಲಾಖೆಯಿಂದ ಅಂಬ್ಯುಲೆನ್ಸ್‌ಗಳ ದುರಸ್ತಿಯ ಬಗ್ಗೆ ಚರ್ಚಿಸಲಾಯಿತು.

ತಡವಾಗಿ ಅರಂಭವಾದ ಸಭೆ : ಕೆಡಿಪಿ ಸಭೆಯು ಮಧ್ಯಾಹ್ನ 2.30 ವರೆಗೆ ಆರಂಭವಾಗಬೇಕಿದ್ದ ಸಭೆ ನಾಲ್ಕು ಗಂಟೆಗೆ ಆರಂಭವಾಯಿತು. ಅಲ್ಲದೆ, ಕೆಲ ಜನಪ್ರತಿನಿಧಿಗಳ ಮೈಕ್‌ಗಳು ಸಮಸ್ಯೆಯಾಗಿದ್ದರಿಂದ ಸಭೆಯಲ್ಲಿ ಸರಿಯಾಗಿ ಕೇಳಿಸದೆ ಅಧಿಕಾರಿಗಳು ಉತ್ತರಿಸಲು ಹರಸಾಹಸಪಟ್ಟರು. ಸಭೆಯ ಅರ್ಧಕ್ಕೆ ಬಂದ ಸಂಸದ ಈ. ತುಕಾರಾಮ್ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಮಧ್ಯೆಯಲ್ಲಿಯೇ ಹೊರಟರು. ಪ್ರತಿಯೊಂದು ವಿಷಯಗಳ ಚರ್ಚೆಯಲ್ಲಿ ಕಂಪ್ಲಿಯ ಸಮಸ್ಯೆಗಳನ್ನು ಶಾಸಕ ಜೆ. ಎನ್. ಗಣೇಶ ಸಚಿವರ ಮುಂದೆ ತೆರೆದಿಟ್ಟರು. ನಗರ ಶಾಸಕ ಭರತರೆಡ್ಡಿ ನಗರದ ವಿಷಯಗಳ ಚರ್ಚೆ ಬಂದ ವೇಳೆ ಅಧಿಕಾರಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದರು. ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಸಿರಗುಪ್ಪ ಶಾಸಕ ಬಿ. ಎಂ. ನಾಗರಾಜ ಗೈರಾಗಿದ್ದರು.