ಜಿಲ್ಲೆ

ಜಿಲ್ಲೆಯಲ್ಲಿ ಸನ್ ಸ್ಟೋಕ್ ಆತಂಕ

ಚಾಮರಾಜನಗರ: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನಲೆಯಲ್ಲಿ ಹೀಟ್ ವೇವ್ (ಶಾಖದ ಹೊಡೆತ) ಮತ್ತು ಹೀಟ್ ವೇವ್ ಸ್ಟೋಕ್‌ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಲು ಹವಾಮಾನ ಇಲಾಖೆ (ಕೆಎಸ್‌ಎನ್‌ಡಿಎಂಸಿ) ನೀಡಿರುವ ಸಲಹೆಗಳನ್ನು ಅನುಸರಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಮನೆಯಿಂದ ಹೊರ ಹೋಗುವುದನ್ನು ಹಾಗೂ ಕೆಲಸ ಮಾಡುವುದನ್ನು ತಪ್ಪಿಸಬೇಕು. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಕೊಡೆ, ಟೋಪಿ, ಬೂಟುಗಳು ಅಥವಾ ಪಾದರಕ್ಷೆಗಳನ್ನು ಬಳಸಬೇಕು. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು ಎಂದು ಸೂಚಿಸಿದೆ.

ದೇಹವನ್ನು ನಿರ್ಜಲೀಕರಣಗೊಳಿಸುವ ಆಲೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು-ಪಾನೀಯಗಳನ್ನು ಮತ್ತು ಹಳೆಯ ಆಹಾರವನ್ನು ಸೇವಿಸಬಾರದು. ರೈತರು, ಕೃಷಿ ಕಾರ್ಮಿಕರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಹಾಗೂ ಇತರರು ಹೊರಗೆ ಕೆಲಸ ಮಾಡುವ ಸಂದರ್ಭದಲ್ಲಿ ಟೋಪಿ ಅಥವಾ ಕೊಡೆ ಬಳಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು ಎಂದು ಹೇಳಿದೆ.

ಬಿಸಿಗಾಳಿ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರಬೇಕು. ನೇರ ಬಿಸಿಲು, ಬಿಸಿಗಾಳಿಗೆ ಒಡ್ಡಿಕೊಳ್ಳಬಾರದು, ಕಪ್ಪು ಗಾಡ ಬಣ್ಣದ ತೆಳುವಾದ ಹಾಗೂ ಸಿಂಥಟಿಕ್ ಉಡುಪುಗಳನ್ನು ಧರಿಸಬಾರದು. ನೇರವಾಗಿ ಬಿಸಿಲಿನ ಝಳಕ್ಕೆ ತಲೆ ಒಡ್ಡಬಾರದು. ಹೆಚ್ಚಿನ ಬಿಸಿಲು ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು. ವಾಸವಿರುವ ಕೋಣೆಯನ್ನು ತಂಪಾಗಿರಿಸಬೇಕು. ಕೋಣೆಗೆ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಬೇಕು. ಬಿಸಿಗಾಳಿ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ನೀಡಬೇಕು ಹಾಗೂ ಬಿಸಿಗಾಳಿ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ ದ್ರವ ಆಹಾರ ನೀಡಬೇಕು. ಚಹಾ, ಕಾಫಿ ಮತ್ತು ಜೇನು ನೀಡಬಾರದು ಎಂದು ತಿಳಿಸಿದೆ.

ತುರ್ತು ಸೇವೆಗೆ ಶುಲ್ಕ ರಹಿತ ದೂ.ಸಂ 1077 ಹಾಗೂ ದೂ.ಸಂ 08226-223160/61/63 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಶಿಲ್ಪಾನಾಗ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.