ಜಿಲ್ಲೆ

ಜಿಲ್ಲೆಯಲ್ಲಿ ಶೇ.99.56 ರಷ್ಟು ಗ್ರಾಹಕರಿಗೆ ಪ್ರಯೋಜನ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿಯೂ ಸಹ ಮುಖ್ಯವಾಗಿದ್ದು, ಗೃಹಬಳಕೆದಾರರಿಗೆ ಪ್ರತಿ ಮಾಹೆ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ಒದಗಿಸಲಾಗುತ್ತಿದೆ.

ಗೃಹಜ್ಯೋತಿ ಯೋಜನೆಯಡಿ ನೊಂದಣಿಯಾದ ಅರ್ಹ ಗ್ರಾಹಕರ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ನಾಗರಿಕರ ಆರ್ಥಿಕ ಅಭಿವೃದ್ದಿ ಮತ್ತು ಸಬಲೀಕರಣಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ 2,68,812 ಅರ್ಜಿಗಳು ನೊಂದಾಯಿಸಿದ್ದು, ಚಾಮರಾಜನಗರ ತಾಲೂಕಿನಲ್ಲಿ 99978, ಗುಂಡ್ಲುಪೇಟೆ ತಾಲೂಕಿನಲ್ಲಿ 60119, ಕೊಳ್ಳೇಗಾಲ ತಾಲೂಕಿನಲ್ಲಿ 45080, ಹನೂರು ತಾಲೂಕಿನಲ್ಲಿ 44854 ಹಾಗೂ ಯಳಂದೂರು ತಾಲೂಕಿನಲ್ಲಿ 18781 ಗ್ರಾಹಕರು ಯೋಜನೆಗೆ ನೊಂದಾಯಿತರಾಗಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಶೇ. 99.56ರಷ್ಟು ಗ್ರಾಹಕರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ ಶೇ. 99.94, ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. 99.95, ಕೊಳ್ಳೇಗಾಲ ತಾಲೂಕಿನಲ್ಲಿ ಶೇ. 99.47, ಹನೂರು ತಾಲೂಕಿನಲ್ಲಿ ಶೇ.98.77 ಹಾಗೂ ಯಳಂದೂರು ತಾಲೂಕಿನಲ್ಲಿ 98.49 ಗ್ರಾಹಕರು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಗೃಹಜ್ಯೋತಿ ಯೋಜನೆಯ ಸಹಾಯಧನಕ್ಕಾಗಿ 8.553 ಕೋಟಿ ರೂ. ಬೇಡಿಕೆಯಿದ್ದು, ವಾರ್ಷಿಕವಾಗಿ 102.63 ಕೋಟಿ ರೂ.ಗಳು ಯೋಜನೆಗಾಗಿ ವೆಚ್ಚವಾಗುತ್ತಿದೆ.

ಗೃಹಜ್ಯೋತಿ ಯೋಜನೆಯಿಂದ ನಮ್ಮ ಮನೆಗೆ ಉಚಿತವಾಗಿ ವಿದ್ಯುತ್ ಲಭಿಸುತ್ತಿದೆ. ವಿದ್ಯುತ್ ಬಿಲ್ ಉಳಿತಾಯ ಹಣದಿಂದ ದಿನಬಳಕೆ ವಸ್ತುಗಳ ಖರೀದಿ ಮಾಡುತ್ತಿದ್ದೇವೆ. ಇನ್ನಿತರ ಮನೆಯ ಖರ್ಚುಗಳಿಗೂ ಅನುಕೂಲವಾಗಿದೆ. ಸರ್ಕಾರದ ಗೃಹಜ್ಯೋತಿ ಯೋಜನೆ ನಮ್ಮಂತಹ ಅನೇಕ ಕುಟುಂಬಗಳಿಗೆ ನೆರವಾಗಿದೆ ಎನ್ನುತ್ತಾರೆ ಕೊಳ್ಳೇಗಾಲ ಪಟ್ಟಣದ ಸರ್ವಮಂಗಳ.

ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಯಿಂದ ನಾವು ಸಂದಾಯ ಮಾಡುತ್ತಿದ್ದ ವಿದ್ಯುತ್ ಶುಲ್ಕ ಉಳಿತಾಯವಾಗುತ್ತಿದೆ. ಇದರಿಂದ ಗೃಹ ಬಳಕೆಯ ವಸ್ತುಗಳನ್ನು ಕೊಳ್ಳಲು ನೆರವಾಗುತ್ತಿದೆ. ಕುಟುಂಬದ ಆರ್ಥಿಕ ನಿರ್ವಹಣೆ ವೆಚ್ಚ ಸ್ವಲ್ಪ ತಗ್ಗಿದೆ ಎನ್ನುತ್ತಾರೆ ಚಾಮರಾಜನಗರದ ನಿವಾಸಿ ವಸುಧ.