ಶಿರಸಿ: ಅತಿವೃಷ್ಟಿಯಿಂದ ಉಂಟಾದ ಪ್ರವಾಹ ಸ್ಥಿತಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಾನಿ ಸಂಭವಿಸಿದೆ. ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿ ಬಳಿ ಹೆಚ್ಚಿನ ಹಾಗೂ ತ್ವರಿತವಾಗಿ ಪರಿಹಾರ ನೀಡುವಂತೆ ಕೋರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಗುಡ್ನಾಪುರ ಕೆರೆ ಹಾಗೂ ಬನವಾಸಿ ವರದಾ ನದಿಗೆ ಭಾನುವಾರ ಬಾಗಿನ ಅರ್ಪಿಸಿ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪತ್ರಕರ್ತರ ಜತೆ ಅವರು ಮಾತನಾಡಿದರು.
ಮಹಾಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ನಾಲ್ವರು ಮೃತಪಟ್ಟಿದ್ದು, ಕೆಲವರು ಕಣ್ಮರೆಯಾಗಿದ್ದಾರೆ. ನೂರಾರು ಮನೆಗಳು ಕುಸಿದಿವೆ. ಜಮೀನುಗಳು ನಾಶವಾಗಿವೆ. ಸೇತುವೆಗಳು, ರಸ್ತೆಗಳು ಹಾಳಾಗಿವೆ. ಪ್ರಥಮ ಹಂತದ ಸಮೀಕ್ಷೆ ನಡೆದಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದು, ಮಾಹಿತಿ ಈಗಾಗಲೇ ಪಡೆಯಲಾಗಿದೆ. ಇನ್ನೂ ಕೆಲವೆಡೆ ಪ್ರವಾಹ ಇಳಿದಿಲ್ಲ. ಅಂಥ ಕಡೆಯೂ ಸಮೀಕ್ಷೆ ನಡೆಸಬೇಕಿದೆ. ಅಂದಾಜು 400 ಕೋಟಿ ರೂಪಾಯಿಗಳಷ್ಟು ಹಾನಿ ಅಂದಾಜಿಸಲಾಗಿದೆ. ಸಮಗ್ರ ವರದಿ ಸಂಗ್ರಹದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸಲಾಗುತ್ತಿದೆ. ಅಧಿಕಾರಿಗಳಿಗೂ ಈ ಕುರಿತು ಸೂಚನೆ ನೀಡಿದ್ದು, ತ್ವರಿತವಾಗಿ ಮೂಲಸೌಲಭ್ಯ ಕಲ್ಪಿಸುವಂತೆ ತಿಳಿಸಲಾಗಿದೆ. ಪ್ರವಾಹದಿಂದ ರಾಜ್ಯದಲ್ಲಿ ಅತಿ ಹೆಚ್ಚು ಹಾನಿಗೀಡಾದ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಗಮಿಸಲಿದ್ದು, ಅವರಲ್ಲಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು.
ನಂತರ ಪ್ರವಾಹ ಪೀಡಿತ ಪ್ರದೇಶವಾದ ಮೊಗಳ್ಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಡಿಎಸ್ಪಿ ರವಿ ನಾಯ್ಕ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ರೂಪಾ ನಾಯ್ಕ, ಮಂಗಳಾ ನಾಯ್ಕ, ರಘು ನಾಯ್ಕ ಇತರರಿದ್ದರು.
ಸಿಎಂ ಬದಲಾವಣೆ ಊಹಾಪೋಹ
ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಮಂತ್ರಿಮಂಡಲ ಮಾಜಿಯಾಗುತ್ತದೆ. ಹೊಸ ಮುಖ್ಯಮಂತ್ರಿ ಘೊಷಣೆಯೊಂದಿಗೆ ಮತ್ತೆ ನಾವು ಸಚಿವರಾಗುತ್ತೇವೆ. ಆದರೆ, ಪ್ರಸ್ತುತ ಎದ್ದಿರುವ ಮುಖ್ಯಮಂತ್ರಿ ಬದಲಾವಣೆ ವಿಷಯ ಕೇವಲ ಊಹಾಪೋಹವಷ್ಟೇ ಎಂದರು.