ಗದೀಶ ಹೊಂಬಳಿ ಬೆಳಗಾವಿ: ಎಲ್ಲ ಬಗೆಯ ಆಟಗಳನ್ನು ಒಂದೇ ಸೂರಿನಡಿ ಆಯೋಜನೆಗೆ ಪ್ರತ್ಯೇಕ ಸ್ಪೋಟ್ಸ್ ಕಾಂಪ್ಲೆಕ್ಸ್ ಬೆಂಗಳೂರು ಬಿಟ್ಟರೇ ರಾಜ್ಯದಲ್ಲಿ ಬೇರೆಕಡೆಗಳಲ್ಲಿ ಇಲ್ಲ. ಈ ಕೊರತೆ ನೀಗಿಸಲು ಬೆಳಗಾವಿಯಲ್ಲಿ ಆಸ್ಸಾಂ, ಹರಿಯಾಣ, ದೆಹಲಿ ಮಾದರಿಯಲ್ಲಿ ದೊಡ್ಡ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಉದ್ದೇಶಿತ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಂಡರೆ ‘ಬೆಳಗಾವಿ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ.
ಕ್ರೀಡಾ ಸಂಕೀರ್ಣಕ್ಕೆ ತಾಲೂಕಿನ ಯಳ್ಳೂರಿನಲ್ಲಿ ಈಗಾಗಲೇ 60 ಎಕರೆ ಜಾಗ ಗುರುತಿ ಸಲಾಗಿದೆ. ಈ ಜಾಗ ಯುವಜನ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರವಾಗಲಿದ್ದು, ಬಜೆಟ್‌ನಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾ ಣಕ್ಕೆ ಹಣ ಮೀಸಲಿಡುವಂತೆ ಸ್ಥಳೀಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗೆ ಕೋರಿದ್ದಾರೆ.
400 ಕೋಟಿ ರೂ. ವೆಚ್ಚದ ಯೋಜನೆ: ಅಂದಾಜು 400 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ಕ್ರಿಕೆಟ್, ಫುಟ್‌ಬಾಲ್ ಹೊರತು ಪಡಿಸಿ ಎಲ್ಲ ಬಗೆಯ ಕ್ರೀಡೆಗಳನ್ನು ಒಂದೇ ಕಡೆ ನಡೆಸಬಹುದು. ಕ್ರೀಡಾಂಗಣಕ್ಕೆ ಮಾಜಿ ಪ್ರಧಾನಿ ‘ದಿ.ಅಟಲ್ ಬಿಹಾರಿ ವಾಜಪೇಯಿ’ ಹೆಸರಿಡಲು ಚಿಂತಿಸಲಾಗಿದೆ. ಈ ಕ್ರೀಡಾ ಸಂಕೀರ್ಣ ನಿರ್ಮಾಣವಾಗುವುದರಿಂದ ಉತ್ತರ ಕರ್ನಾಟಕದ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಈಜು, ಕುಸ್ತಿ, ಜುಡೋ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಖೋಖೋ ಆಟದಲ್ಲಿ ಕ್ರೀಡಾಪಟುಗಳು ಮುಂದಿದ್ದಾರೆ. ಇಲ್ಲಿಯ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ದರ್ಜೆಯ ಕೋಟ್‌ಗಳು ಲಭ್ಯವಾಗಲಿವೆ. ಕ್ರೀಡಾಂಗಣ ನಿರ್ಮಾಣವಾದರೆ ಈ ಭಾಗದ ಕ್ರೀಡಾಪಟುಗಳು 10 ವರ್ಷದಲ್ಲಿ ಒಲಿಂಪಿಕ್ ಪದಕ ಗೆಲ್ಲುವ ಮಟ್ಟದಲ್ಲಿ ಸಿದ್ಧಗೊಳ್ಳುತ್ತಾರೆ ಎಂಬ ಅಭಿಪ್ರಾಯ ಕ್ರೀಡಾ ವಲಯದಿಂದ ಕೇಳಿಬಂದಿದೆ.
ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ: ಉದ್ದೇಶಿತ ಕ್ರೀಡಾ ಸಂಕೀರ್ಣ ನಿರ್ಮಾಣ ವಾದರೆ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ಜರುಗಲಿವೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳು ನಗರಕ್ಕೆ ಆಗಮಿಸುತ್ತಾರೆ. ಗಣ್ಯರು ಕೂಡ ಬರುತ್ತಾರೆ. ಈ ಭಾಗದಲ್ಲಿ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದಲಿದೆ. ಉತ್ತರ ಕರ್ನಾಟಕವೂ ಜನಪ್ರಿಯಗೊಳ್ಳಲಿದೆ. ಹೊರಗಿನ ಜನ ಬರುವುದರಿಂದ ವ್ಯಾಪಾರ-ವಹಿವಾಟು ವೃದ್ಧಿಯಾಗುತ್ತದೆ. ಜತೆಗೆ ಕ್ರೀಡಾಂಗಣದಿಂದ 1 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎನ್ನುತ್ತಾರೆ ಜನಪ್ರತಿನಿಧಿಗಳು. ಈ ಸಂರ್ಕೀಣ ನಿರ್ಮಾಣಕ್ಕೆ ಶಾಸಕ ಅಭಯ ಪಾಟೀಲ ಪಣ ತೊಟ್ಟಿದ್ದಾರೆ.