ಕಂಪ್ಲಿ: ಬಳ್ಳಾರಿ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಇಲ್ಲ. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಎಸ್.ಎನ್.ಮಂಜುನಾಥ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ 11,500 ಮೆಟ್ರಿಕ್ ಟನ್ ಯೂರಿಯಾ ಮಾರುಕಟ್ಟೆಯಲ್ಲಿದ್ದು, ಸದ್ಯದಲ್ಲೇ ಇನ್ನೂ 17 ಸಾವಿರ ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಬರಲಿದೆ. ಯೂರಿಯಾ ದಾಸ್ತಾನು ಇದ್ದರೂ ರೈತರಿಗೆ ಮಾರಾಟ ಮಾಡದಿದ್ದರೆ ಮಾರಾಟಗಾರರ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾರಾಟ ಮಳಿಗೆಗೆಳಿಗೆ ಭೇಟಿ ನೀಡಿ ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕಗಳ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ರೈತರಿಗೆ ರಸಗೊಬ್ಬದೊಂದಿಗೆ ಬೇರೆ ಏನನ್ನೂ ಲಿಂಕ್ ಮಾಡಿ ಮಾರಾಟ ಮಾಡಬಾರದು. ರೈತರು ರಸಗೊಬ್ಬರ ಕೊರತೆ, ಹೆಚ್ಚಿನ ದರ ವಸೂಲಿ ಸೇರಿದಂತೆ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೂರು ನೀಡಿದಲ್ಲಿ ಕಾನೂನು ಕ್ರಮ ವಹಿಸಲಾಗುವುದು ಎಂದು ಎಸ್.ಎನ್.ಮಂಜುನಾಥ ತಿಳಿಸಿದರು.