ಜಿಲ್ಲೆ

ಜಿಲ್ಲೆಯಲ್ಲಿ ಮೂರ್ತಿ ಪ್ರತಿಷ್ಟಾಪನೆಗೆ ಎಲ್ಲಾ ಸಿದ್ಧತೆ

ಹಾಸನ: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗ ಗಣೇಶನ ಹಬ್ಬಕ್ಕೆ ಜಿಲ್ಲೆ ಸಜ್ಜಾಗಿದ್ದು, ಮೂರ್ತಿ ಪ್ರತಿಷ್ಟಾಪನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರ ಸೇರಿ ಜಿಲ್ಲಾದ್ಯಂತ ಗಣೇಶ ಮೂರ್ತಿಯನ್ನು ಸಡಗರ ಸಂಭ್ರಮದಿಂದ ಪ್ರತಿಷ್ಟಾಪಿಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲೇ 250ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಇಡಲಾಗುತ್ತಿದೆ. ಇನ್ನು ಶುಕ್ರವಾರ ಸ್ವರ್ಣಗೌರಿ ಹಬ್ಬವೂ ಸಡಗರದಿಂದ ನಡೆಯಿತು. ಮಧ್ಯಾಹ್ನದ ವರೆಗೂ ಮಾರುಕಟ್ಟೆಗಳಲ್ಲಿ ಸ್ವರ್ಣಗೌರಿ ಮೂರ್ತಿ ಖರೀದಿ ಜೋರಾಗಿ ನಡೆಯಿತು. ಬೆಲೆ ಏರಿಕೆ ನಡುವೆಯೂ ಗ್ರಾಹಕರು ಮಾರುಕಟ್ಟೆಗೆ ಲಗ್ಗೆಯಿಟ್ಟು ಅಗತ್ಯ ಪೂಜಾ ಸಾಮಾಗ್ರಿ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು. ಗುರುವಾರ ಹಾಗು ಶುಕ್ರವಾರ ನಗರದ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ನಗರದ ಎನ್.ಆರ್.ವೃತ್ತ, ಮಹಾವೀರ ವೃತ್ತ, ಕಸ್ತೂರ ಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಅಧಿಕ ಸಮಯದ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬರದ ಛಾಯೆಯಿಂದ ಹೊರಬಂದಿರುವ ಜನರಿಗೆ ಬೆಲೆಗಳ ಏರಿಳಿತವೂ ವರದನಾವಾಗಿದ್ದು, ಗಣೇಶ ಮೂರ್ತಿಗಳ ಖರೀದಿಯಲ್ಲಿ ತೊಡಗಿದರು. 15 ದಿನಗಳಿಂದಲೂ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದ್ದರೂ ಪ್ರತಿಷ್ಟಾಪನೆಗೆ ಒಂದು ದಿನ ಬಾಕಿ ಇರುವಂತೆ ಮೂರ್ತಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂತು. ಆರಂಭದಲ್ಲಿ 6 ಅಡಿ ಎತ್ತರದ ಗಣೇಶ ಮೂರ್ತಿಗೆ 25 ಸಾವಿರ ರೂ. ದರ ನಿಗದಿಪಡಿಸಿದ್ದ ವರ್ತಕರು ಶುಕ್ರವಾರ 8 ರಿಂದ 10 ಸಾವಿರ ರೂ.ಗೆ ಮಾರಾಟ ಮಾಡಿದರು. ಬಗೆ ಬಗೆಯ ಆಕರ್ಷಕ ಮೂರ್ತಿಗಳನ್ನು ಜನರು ಪರಿಶೀಲಿಸಿ ಖರೀದಿಸಿದರು. ಇನ್ನು ಮನೆಗಳಲ್ಲಿ ಪ್ರತಿಷ್ಟಾಪಿಸುವ ಸಣ್ಣ ಗಣೇಶ ಮೂರ್ತಿಗಳು 200 ರಿಂದ 500 ರೂ. ವರೆಗೆ ಲಭ್ಯವಾದವು.
ಪೆಂಡಾಲ್‌ಗಳಲ್ಲಿ ಸಿದ್ಧತೆ:
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಟಾಪಿಸುವ ಗಣಪತಿಗೆ ಪೆಂಡಾಲ್‌ಗಳಲ್ಲಿ ಭರಪೂರ ಸಿದ್ಧತೆ ನಡೆದವು. ಶಾಮಿಯಾನ, ಮಂಟಪ, ಅಲಂಕಾರ ಮಾಡುವಲ್ಲಿ ಯುವಕರು ತಲ್ಲೀಣರಾಗಿದ್ದರು. ಆಯಾ ಓಣಿಯ ಯುವಕರು ಗಣೇಶ ಮೂರ್ತಿ ಪ್ರತಿಷ್ಟಾಪನೆ ಹೆಸರಿನಲ್ಲಿ ಸಂಘ ಮಾಡಿಕೊಂಡಿದ್ದು ಬ್ಯಾನರ್, ಫ್ಲೆಕ್ಸ್ ಹಾಕುವ ಮೂಲಕ ಗಣೇಶ ಉತ್ಸವಕ್ಕೆ ಸಜ್ಜಾಗಿದ್ದಾರೆ.
ಹೂ ಹಣ್ಣು ಬೆಲೆ ಗಗನಕ್ಕೆ:
ಹಬ್ಬದ ಸಂದರ್ಭದಲ್ಲಿ ಹೂವು, ಹಣ್ಣಿನ ಬೆಲೆ ಗಗನಕ್ಕೆರುವುದು ಸಾಮಾನ್ಯವಾಗಿದೆ. ಬಾಳೆ ಹಣ್ಣು ಮಾತ್ರ ಕಳೆದ ಒಂದು ವಾರಕ್ಕೆ ಹೋಲಿಸಿದರೆ ಕಡಿಮೆ ಬೆಲೆಗೆ ಮಾರಾಟವಾಯಿತು. ಎರಡೂರು ದಿನಗಳಿಂದ ಕೆ.ಜಿ.ಗೆ 150 ರೂ.ನಂತೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಶುಕ್ರವಾರ 80 ರೂ.ಗೆ ಮಾರಾಟವಾಯಿತು. ಉಳಿದಂತೆ ಸೇಬು ಕೆ.ಜಿ.ಗೆ 200 ರೂ., ದಾಳಿಂಬೆ 240, ಮೋಸಂಬಿ 80 ರೂ., ಕಿತ್ತಳೆ 140 ರೂ., ಬಾಳೆ ಕಂದು ಜೋಡಿಗೆ 50 ರೂ., ಸೇವಂತಿ ಹೂವು ಒಂದು ಮಾರಿಗೆ 100 ರೂ. ಕಾಕಡ 150 ರೂ.. ಗುಲಾಬಿ ಬಿಡಿ ಕೆ.ಜಿ.ಗೆ 300 ರೂ., ನಂತೆ ಲಭ್ಯವಾಯಿತು.