ಬೆಳಗಾವಿ: ನದಿಗಳ ಪ್ರವಾಹ, ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮನೆಗಳ ಕುಸಿತ, ಸೇತುವೆಗಳು ಜಲಾವೃತಗೊಂಡಿದ್ದರಿಂದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಕೃಷ್ಣಾ ನದಿ ಪ್ರವಾಹದ ಹಿನ್ನೆಲೆ ಅಥಣಿ ತಾಲೂಕಿನ ಮಂಗಾವತಿ ಗ್ರಾಮಸ್ಥರನ್ನು ಜಿಲ್ಲಾಡಳಿತ ಗುರುವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಮತ್ತು ನಾಲಾಗಳ ಪ್ರವಾಹದಿಂದಾಗಿ ಚಿಕ್ಕೋಡಿ, ರಾಯಬಾಗ, ಗೋಕಾಕ, ಮೂಡಲಗಿ, ನಿಪ್ಪಾಣಿ, ಹುಕ್ಕೇರಿ, ಖಾನಾಪುರ, ರಾಮದುರ್ಗ ತಾಲೂಕುಗಳಲ್ಲಿ 25 ಸೇತುವೆಗಳ ಜಲಾವೃತಗೊಂಡಿವೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ನಿಪ್ಪಾಣಿ, ಅಥಣಿ ತಾಲೂಕಿನ ಗ್ರಾಮಗಳಲ್ಲಿ ಕೃಷ್ಣಾ ನದಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ ಗುರುವಾರ 1.95 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು, ಮಾರ್ಕಂಡೇಯ, ಬಳ್ಳಾರಿ ನಾಲಾದಿಂದ ನಿತ್ಯ 21 ಸಾವಿರ ಕ್ಯೂಸೆಕ್ ನೀರು ಘಟಪ್ರಭಾ ನದಿ ಸೇರುತ್ತಿರುವ ಹಿನ್ನೆಲೆಯಲ್ಲಿ ನದಿ ದಡದ ಅಧಿಕ ಗ್ರಾಮಗಳು ಜಲಾವೃತ್ತಗೊಂಡಿವೆ. ಕೆಲ ಗ್ರಾಮಗಳಿಗೆ ಸಂಪರ್ಕ ಕಡಿತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 25 ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಿದೆ.
ಬೆಳಗಾವಿ ಮಹಾನಗರ, ಗ್ರಾಮೀಣ ಹಾಗೂ ಖಾನಾಪುರ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆ ಹತ್ತಕ್ಕೂ ಅಧಿಕ ಮನೆಗಳು ಕುಸಿದಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿರುವ ಹಿನ್ನೆಲೆ 200 ಅಧಿಕ ಹೆಕ್ಟೇರ್ ಕಬ್ಬು, ಭತ್ತದ ಬೆಳೆಗಳು ಜಲಾವೃತಗೊಂಡಿವೆ.
ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ಪ್ರವಾಹದಿಂದಾಗಿ ಚಿಕ್ಕೋಡಿ, ರಾಯಬಾಗ, ಕಾಗವಾಡ, ನಿಪ್ಪಾಣಿ, ಗೋಕಾಕ, ಮೂಡಲಗಿ, ಖಾನಾಪುರ ತಾಲೂಕಿನ ವ್ಯಾಪ್ತಿಗಳಲ್ಲಿ ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ, ಜಿಲ್ಲಾ ಹೆದ್ದಾರಿಗಳ ಮೇಲೆ ನದಿ ನೀರು ಹರಿಯುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಸಿದೆ.