ಜಿಲ್ಲೆ

ಜಿಲ್ಲೆಯಲ್ಲಿ ಮಳೆ ಇಳಿಮುಖ

ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ ಮಳೆ ಇಳಿಮುಖವಾಗಿದ್ದು, ನೆರೆಯ ಭೀತಿ ಕಡಿಮೆಯಾಗಿದೆ. ಸೆ. 23 ರಂದು ಅಲ್ಪ ಸ್ವಲ್ಪ ಮಳೆಯಾಗಲಿದ್ದು, ನಂತರ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 105.5, ಭಟ್ಕಳದಲ್ಲಿ 80, ಹಳಿಯಾಳದಲ್ಲಿ 29.6, ಹೊನ್ನಾವರದಲ್ಲಿ 79.3, ಕಾರವಾದಲ್ಲಿ 86, ಕುಮಟಾದಲ್ಲಿ 56.9, ಮುಂಡಗೋಡಿನಲ್ಲಿ 22.4, ಸಿದ್ದಾಪುರದಲ್ಲಿ 45.8, ಶಿರಸಿಯಲ್ಲಿ 48.5, ಜೊಯಿಡಾದಲ್ಲಿ 74.4, ಯಲ್ಲಾಪುರದಲ್ಲಿ 82.4 ಮಿಮೀ ಮಳೆಯಾಗಿದೆ.

ಒಳಹರಿವು ಹೆಚ್ಚಳ: ಸೂಪಾ ಅಣೆಕಟ್ಟೆಗೆ 23753 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ಕದ್ರಾ ಅಣೆಕಟ್ಟೆಗೆ 34866 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ವಿದ್ಯುತ್ ಉತ್ಪಾದನೆ ಮಾಡಿ 18256 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಮನೆಗೆ ಹಾನಿ: ಭಟ್ಕಳ ತಾಲೂಕಿನಲ್ಲಿ ಮಳೆಯಿಂದ ಮುಂಡಳ್ಳಿಯ ರಾಮಚಂದ್ರ ನೀಲಾ ಹಳ್ಳೇರ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಗ್ರಾಮ ಲೆಕ್ಕಿಗ ಸಲ್ಮಾನ್, ಗ್ರಾಮ ಸಹಾಯಕ ಮಾರುತಿ ನಾಯ್ಕ ಸ್ಥಳಕ್ಕೆ ತೆರಳಿದ್ದಾರೆ.

ಬಿರುಕು ಬಿಟ್ಟ ಹರೂರು ರಸ್ತೆ: ಮಲ್ಲಾಪುರ-ಯಲ್ಲಾಪುರ ನಡುವೆ ಸಂಪರ್ಕ ಕಲ್ಪಿಸುವ ಹರೂರು-ಬಾರೆ-ಇಡಗುಂದಿ ರಸ್ತೆಯಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ. ಕೈಗಾ ಅಣುಶಕ್ತಿ ಕೇಂದ್ರದ ಕ್ರಾಸ್​ನಿಂದ ಸುಮಾರು 5 ಕಿಮೀ ದೂರದಲ್ಲಿ ರಸ್ತೆ ಸುಮಾರು 40 ಅಡಿಯವರೆಗೂ ಸುಮಾರು 6 ಇಂಚು ಅಗಲದ ಬಿರುಕು ಬಿಟ್ಟಿದೆ. ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಬಿರುಕು ದೊಡ್ಡದಾಗುತ್ತಿದ್ದು, ಇಡೀ ಗುಡ್ಡವೇ ಕುಸಿಯುವ ಆತಂಕವಿದೆ. ಕುಸಿದಲ್ಲಿ ಹರೂರು ಸೇರಿ ಹಲವು ಗ್ರಾಮಗಳು ಮಲ್ಲಾಪುರದ ಸಂಪರ್ಕ ಕಡಿದುಕೊಳ್ಳಲಿವೆ. ಕೈಗಾ ಭಾಗದಿಂದ ಯಲ್ಲಾಪುರ ತಾಲೂಕಿಗೆ ಸಂಪರ್ಕ ಕಲ್ಪಿಸುವ ಅತಿ ಸಮೀಪದ ರಸ್ತೆ ಇದಾಗಿದೆ.

ಹಳ್ಳದಲ್ಲಿ ಕೊಚ್ಚಿ ಹೋದವ ಸಾವು: ಕುಮಟಾ ತಾಲೂಕಿನ ಹೆಬೈಲ್​ನ ಹೊರಮಕ್ಕಿಯ ಈಶ್ವರ ಗಣಪಯ್ಯ ನಾಯ್ಕ (35) ತೋಟದ ಪಕ್ಕದ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಮಳೆಯಿಂದ ತುಂಬಿ ಹರಿಯುತ್ತಿ್ತ್ದ ಹಳ್ಳ ದಾಟುವಾಗ ಸೆಳೆತಕ್ಕೆ ಆಯತಪ್ಪಿ ಕೊಚ್ಚಿಹೋಗಿದ್ದರು. ಸೋಮವಾರ ಮೃತದೇಹ ಹಳ್ಳದಂಚಿನ ಪೊದೆಯಲ್ಲಿ ಪತ್ತೆಯಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.