ಧಾರವಾಡ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಹಾರಾಷ್ಟ್ರದಿಂದ ಮರಳಿದವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಸೋಮವಾರವೂ ಕರೊನಾ ಹಾವಳಿ ಮುಂದುವರಿದಿದ್ದು, ಮಹಾರಾಷ್ಟ್ರದಿಂದ ಬಂದಿದ್ದ ಬಾಲಕಿ ಹಾಗೂ ರಾಜಸ್ಥಾನದಿಂದ ಮರಳಿರುವ ಮೂವರು ಸೇರಿ ನಾಲ್ವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
46 ವರ್ಷದ ಪುರುಷ, 42 ವರ್ಷದ ಮಹಿಳೆ ಹಾಗೂ 14 ವರ್ಷದ ಬಾಲಕ ರಾಜಸ್ಥಾನದಿಂದ ಹಿಂದಿರುಗಿದವರಾಗಿದ್ದಾರೆ. ಇವರು ಹುಬ್ಬಳ್ಳಿ ಮಂಗಳವಾರಪೇಟೆಯ ನಿವಾಸಿಗಳಾಗಿದ್ದು, ಹೋಂ ಕ್ವಾರಂಟೈನ್ನಲ್ಲಿದ್ದರು. ಹುಬ್ಬಳ್ಳಿ ಶಾಂತಿನಗರ ವಿನಯ ಕಾಲನಿ ನಿವಾಸಿ 4 ವರ್ಷದ ಬಾಲಕಿಯಲ್ಲೂ ಸೋಂಕು ದೃಢಪಟ್ಟಿದೆ. ಈಕೆ ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ ಹೊಂದಿದ್ದಾಳೆ. ಬಾಲಕಿ ಕುಟುಂಬದವರು ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದರು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಈಗಾಗಲೇ 38 ಜನ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಮಗು ಸೇರಿ ಐವರು ಡಿಸ್ಚಾರ್ಜ್ : ಕೋವಿಡ್ನಿಂದ ಚೇತರಿಸಿಕೊಂಡಿರುವ ನಾಲ್ವರನ್ನು ಭಾನುವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ನಿಂದ ಬಿಡುಗಡೆ ಮಾಡಲಾಗಿದೆ. ಮೇ 21ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ತಾಲೂಕಿನ ಉಪ್ಪಿನಬೆಟಗೇರಿಯ 9 ವರ್ಷದ ಬಾಲಕಿ, 24 ವರ್ಷದ ಮಹಿಳೆ, ಮೇ 16ರಂದು ಸೋಂಕು ದೃಢಪಟ್ಟಿದ್ದ ಧಾರವಾಡ ಓಂನಗರ ನಿವಾಸಿ 34 ವರ್ಷದ ಪುರುಷ ಹಾಗೂ ಮೇ 23ರಂದು ಸೋಂಕು ದೃಢಪಟ್ಟಿದ್ದ ಯಾಲಕ್ಕಿ ಶೆಟ್ಟರ್ ಕಾಲನಿ ನಿವಾಸಿ 51 ವರ್ಷದ ಪುರುಷ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಎಲ್ಲರೂ ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಹೊಂದಿದ್ದರು.
ಮಗು ಬಿಡುಗಡೆ: ಹುಬ್ಬಳ್ಳಿ ಕಿಮ್ಸ್ಗೆ ದಾಖಲಾಗಿದ್ದ ಮಗು ಸಂಪೂರ್ಣ ಚೇತರಿಕೆಯಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಮೇ 25ರಂದು ಎರಡೂವರೆ ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮಗು ಸಂಪೂರ್ಣ ಚೇತರಿಕೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈವರೆಗೆ ಒಟ್ಟು 39 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತ ಗುಣ
ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್್ಸ) ಗ್ಯಾಂಗ್ರಿನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ದಾವಣಗೆರೆ ಮೂಲದ ಕರೊನಾ ಸೋಂಕಿತ ವ್ಯಕ್ತಿ (69) ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಡಾ.ಎಸ್.ವೈ. ಮುಲ್ಕಿಪಾಟೀಲ ಅವರ ನೇತೃತ್ವದಲ್ಲಿ ಗ್ಯಾಂಗ್ರಿನ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿತ್ತು. ಕರೊನಾ ಸೋಂಕಿನ ವರದಿ ನೆಗೆಟಿವ್ ಬರುವುದನ್ನು ಕಾಯಲಾಗುತ್ತಿತ್ತು. ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಶುಭ ಕೋರಿ ಕಳುಹಿಸಿಕೊಡಲಾಗಿದೆ. ವ್ಯಕ್ತಿಯ ಮಗ ಇನ್ನೂ ಕ್ವಾರಂಟೈನ್ನಲ್ಲಿ ಇರುವುದರಿಂದ ವೈದ್ಯರೊಬ್ಬರ ಸಲಹೆ ಮೇರೆಗೆ ಆಂಬುಲೆನ್ಸ್ನಲ್ಲಿ ಸೋಂಕು ಮುಕ್ತ ವ್ಯಕ್ತಿಯನ್ನು ದಾವಣಗೆರೆಗೆ ಕಳುಹಿಸಿಕೊಡಲಾಯಿತು.
ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಉಪ ವೈದ್ಯಕೀಯ ಅಧೀಕ್ಷಕರಾದ ಡಾ.ಎಸ್.ವೈ. ಮುಲ್ಕಿಪಾಟೀಲ, ಡಾ.ರಾಜಶೇಖರ ದ್ಯಾಬೇರಿ, ಡಾ. ಲಕ್ಷ್ಮೀಕಾಂತ ಲೋಕರೆ, ಇತರರು ಇದ್ದರು.
ಜಿಲ್ಲೆಯಲ್ಲಿ 354 ಶಂಕಿತರು ಪತ್ತೆ
ಧಾರವಾಡ: ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 354 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಭಾನುವಾರ ಇದ್ದ 19788 ನಿಗಾವಹಿಸಿದವರ ಸಂಖ್ಯೆ ಸೋಮವಾರ 20177ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 19181 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 18825 ಜನರ ವರದಿ ನೆಗೆಟಿವ್ ಬಂದಿವೆ. 64 ಪ್ರಕರಣಗಳು ಪಾಸಿಟಿವ್ ಬಂದಿದ್ದು, 26 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 38 ಜನರು ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 330 ವರದಿಗಳು ಬರಬೇಕಿದೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 20177 ಜನರ ಮೇಲೆ ನಿಗಾ ಇಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.