ಹಾಸನ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಅರಕಲಗೂಡು ತಾಲೂಕಿನ ಕಡವಿನ ಹೊಸಹಳ್ಳಿಯಿಂದ ಬೇಲೂರು ತಾಲೂಕಿನ ಚೆನ್ನಾಪುರ ಗಡಿಯವರೆಗೆ ಮಾನವ ಸರಪಳಿ ರಚನೆ ಕಾರ್ಯಕ್ರಮ ಯಶಸ್ವಿಗೆ ಜರುಗಿತು.
ಬೇಲೂರು ರಸ್ತೆಯ ಸಿದ್ಧಾರ್ಥ ನಗರದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದಲಾಯಿತು. ಒಂದೊಂದು ಕಿ.ಮೀ. ಅಂತರದಲ್ಲಿ ಗಿಡ ನೆಡಲಾಯಿತು.
ಸಂಸದ ಶ್ರೇಯಸ್ ಪಟೇಲ್ ಅವರು ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಒಟ್ಟು 2,500 ಕಿ.ಮೀ. ಗಳ ಮಾನವ ಸರಪಳಿ ರಚನೆ ಮಾಡುತ್ತಿರುವುದು ಐತಿಹಾಸಿಕ ದಾಖಲೆಯ ಸಂಕೇತ. ಇದು ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿಯಲ್ಲಿ ಎಲ್ಲರೂ ಸಾಗುತ್ತಿದ್ದೇವೆ. ಈ ಕಾರ್ಯಕ್ರಮ ಭ್ರಾತೃತ್ವದ ಸಂಕೇತ, ಭಾರತದ ಪ್ರಜೆಯಾಗಿರುವುದು ಹೆಮ್ಮೆ ಎನಿಸುತ್ತದೆ. ಜಾತಿ ಭೇದವಿಲ್ಲದೆ ಎಲ್ಲರೂ ಕೈ-ಕೈ ಹಿಡಿದು ಮಾನವ ಸರಪಳಿ ರಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ. ಜಿಲ್ಲೆಯ ಅರಕಲಗೂಡು ತಾಲೂಕಿನ ಕಡುವಿನ ಹೊಸಹಳ್ಳಿಯಿಂದ ಹಾಸನ ತಾಲೂಕು ಮಾರ್ಗವಾಗಿ ಬೇಲೂರು ತಾಲೂಕಿನ ಚೆನ್ನಾಪುರ ಗಡಿಯವರೆಗೆ ಮಾನವ ಸರಪಳಿ ರಚನೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು. ಹಾಗೆಯೇ ಕಾರ್ಯಕ್ರಮ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಅಧಿಕಾರಿಗಳಿಗೂ ಅಭಿನಂದನೆ ಎಂದು ಹೇಳಿದರು.
ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸಿ ಯಶಸ್ವಿಗೊಳಿಸಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ. ಈ ಕಾರ್ಯಕ್ರಮ ಆಯೋಜಿಸಿದ ಸರ್ಕಾರಕ್ಕೆ ಹಾಗೂ ವಿಶೇಷವಾಗಿ ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಹಲವಾರು ದಿನಗಳಿಂದ ಶ್ರಮಿಸಿದ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ಕೃತಜ್ಞತೆ ಅರ್ಪಿಸಿದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಮಾತನಾಡಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ ಹೊಂದಿರುವ ದೇಶ ನಮ್ಮದು. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು ಸಾಕಾರಗೊಳಿಸಬೇಕು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಕರೆಗೆ ಓಗೊಟ್ಟು ಶಾಲಾ- ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ಸಂಘ- ಸಂಸ್ಥೆಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರಾದ ಜಿ.ಎಲ್.ಮುದ್ದೇಗೌಡ, ನಗರ ಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ ಟಿ.ಶಾಂತಲಾ, ಉಪ ವಿಭಾಗಾಧಿಕಾರಿ ಮಾರುತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಮತ್ತಿತರರು ಉಪಸ್ಥಿತರಿದ್ದರು.