ಚಿತ್ರದುರ್ಗ: ರಾಜ್ಯದಲ್ಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಅಧಿಕವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಳವಳ ವ್ಯಕ್ತಪಡಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬಾಲ್ಯವಿವಾಹ ತಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಈ ಪ್ರಕರಣಗಳ ತಪ್ಪಿಸ್ಥರ ಪೈಕಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದರು.
ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ ನಿಷೇಧ ಕುರಿತು ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಅಧಿಕಾರಿಗಳಿಗೂ ತರಬೇತಿ ನೀಡಲಾಗಿದೆ. ಬಾಲ್ಯವಿವಾಹದ 87 ದೂರುಗಳ ಪೈಕಿ 42ನ್ನು ತಡೆದು, 41 ಪ್ರಕರಣಗಳಿಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಒಂದು ಲಕ್ಷ ಜೀವಂತ ಜನನಕ್ಕೆ 83.29 ಇದೆ. ತಾಯಂದಿರ ಮರಣದ ರಾಜ್ಯ ಪ್ರಮಾಣ ಸರಾಸರಿ 69 ರಷ್ಟಿದೆ. ಸಾಂಸ್ಥಿಕ ಹೆರಿಗೆ ನಂತರದಲ್ಲೂ ಬಾಣಂತಿಯರು ಮೃತಪಡುತ್ತಿದ್ದಾರೆ. ಬಾಣಂತಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲವೇ? ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಅವರನ್ನು ಸಚಿವೆ ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಜುಲೈವರೆಗೆ ಐವರು ಬಾಣಂತಿಯರ ಸಾವಾಗಿದೆ. ಆಸ್ಪತ್ರೆಯಲ್ಲಿ ಹೆರಿಗೆ ಆಗಿ ಮನೆಗೆ ತೆರಳಿದವರು ಮೃತಪಟ್ಟಿದ್ದಾರೆ ಎಂದು ಅಭಿನವ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಒಂದು ಸಾವಿರ ಜೀವಂತ ಜನನಕ್ಕೆ 13 ಇದೆ. ರಾಜ್ಯದ ಶಿಶು ಪ್ರಮಾಣ ಸರಾಸರಿ 19 ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದೆ ಎಂದು ಡಿಸಿ ಟಿ.ವೆಂಕಟೇಶ್ ತಿಳಿಸಿದರು.
ಮಹಿಳಾ ಸಾಕ್ಷರತಾ ಪ್ರಮಾಣ ಶೇ.65 ಇದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದ್ದ ಜಿಲ್ಲೆ 21ನೇ ಸ್ಥಾನಕ್ಕೆ ಕುಸಿದಿರುರುವುದು ಸರಿಯಲ್ಲವೆಂದು ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು.
ಫಲಿತಾಂಶ ಸುಧಾರಣೆಗೆ ನಿರ್ದೇಶನ ನೀಡಿದ್ದೇನೆ. ಈ ನಿಟ್ಟಿನಲ್ಲಿ ಬಿಇಒಗಳನ್ನು ಹೊಣೆ ಮಾಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಎಚ್ಚರಿಸಿದರು.
ಅಂಗನವಾಡಿ ಕಟ್ಟಡಕ್ಕೆ ಸಿಎ ನಿವೇಶನ ಉಚಿತ ಹಂಚಿಕೆಗೆ ಶೀಘ್ರ ಆದೇಶಿಸಲಾಗುವುದು. ಅಂಗನವಾಡಿ ಕಾರ‌್ಯಕರ್ತೆಯರ ನೇಮಕದಲ್ಲಿ ವಿಧವೆ, ಅಂಗವಿಕಲರಿಗೆ ಶೇ.10ಕ್ಕೆ ಕೃಪಾಂಕ ಹೆಚ್ಚಿಸಲಾಗುವುದು. ಕಟ್ಟಡಕ್ಕೆ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗುವುದೆಂದು ಸಚಿವೆ ಭರವಸೆ ನೀಡಿದರು.
ಅಂಗನವಾಡಿಗಳಲ್ಲಿ ಆಂಗ್ಲ ಹಾಗೂ ಕನ್ನಡ ಮಾಧ್ಯಮದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುವುದು. ಆಹಾರ ಪದಾರ್ಥಗಳ ದುರುಪಯೋಗ ವಿರುದ್ಧ, ಮೇಲ್ವಿಚಾರಕರು, ಸಿಡಿಪಿಒಗಳನ್ನು ಹೊಣೆ ಮಾಡಲಾಗುವುದು ಎಂದು ಎಂದು ಹೆಬ್ಬಾಳ್ಕರ್ ಎಚ್ಚರಿಸಿದರು.
ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಈವರೆಗೆ 26,260 ಕೋಟಿ ರೂ. ಗಳನ್ನು ಜಮಾ ಆಗಿದೆ. ಜುಲೈ, ಆಗಸ್ಟ್ ಹಣವನ್ನು 10 ದಿನದೊಳಗೆ ಜಮೆ ಮಾಡುವುದಾಗಿ ಹೇಳಿದರು.
ಅರ್ಹರಿಗೆ ಮಾಸಾಶನ ತಲುಪಿಸಲು ಪಿಂಚಣಿ ಅದಾಲತ್ ನಡೆಸುವಂತೆ ಡಿಸಿಗೆ ಸೂಚಿಸಿದ ಸಚಿವೆ, ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದರು. ರಾಷ್ಟ್ರೀಯ ಪೋಷಣ್ ಮಾಸಾಚರಣೆಗೆ ಚಾಲನೆ ನೀಡಿದರು.
ದ್ರಾಕ್ಷರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್‌ಬಾಬು, ಕುಡಾ ಅಧ್ಯಕ್ಷ ಎ.ಕೆ.ತಾಜ್‌ಪೀರ್, ಗ್ಯಾರಂಟಿ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಇಲಾಖೆ ಹಿರಿಯ ಅಧಿಕಾರಿ ಗಳಾದ ಸಿದ್ದೇಶ್ವರ್, ರಾಘವೇಂದ್ರ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮತ್ತಿತರರಿದ್ದರು.
*ದನಕಾಯಲು ಬಂದಿಲ್ಲ
ಅಂಗನವಾಡಿ ಕಟ್ಟಡಗಳ ನಿರ್ಮಾಣ ಪ್ರಗತಿ ಪರಿಶೀಲನೆ ವೇಳೆ ಪಂ.ರಾಜ್ ಇಂಜಿನಿಯರಿಂಗ್ ಇಇ ಗೈರು ಆಗಿದ್ದನ್ನು ಗಮನಿಸಿ ಸಿಟ್ಟಿಗೆದ್ದ ಸಚಿವೆ ಹೆಬ್ಬಾಳ್ಕರ್, ಇಬ್ಬರು ಸಚಿವರು, ಶಾಸಕರು ಬಂದಿರುವುದು ದನಕಾಯಲೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಗೈರು ಕುರಿತು ಮುಖ್ಯಮಂತ್ರಿ ಗಮನಕ್ಕೆ ತರುವೆ, ಅವರಿಗೆ ನೋಟಿಸ್ ಕೊಡಿ ಎಂದು ಡಿಸಿಗೆ ಸೂಚಿಸಿದರು. ಬೆಂಗಳೂರಿಗೆ ಹಿಂತಿರುಗುವುದರೊಳಗೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ತಮ್ಮನ್ನು ಭೇಟಿ ಮಾಡಬೇಕೆಂದರು.
*ಕೋಟ್
ಅಂಗನವಾಡಿ ನೇಮಕದಲ್ಲಿ ವಿಧವೆಯರು, ಅಂಗವಿಕಲ ಮಹಿಳೆಯರಿಗೆ ಆದ್ಯತೆ ನೀಡಬೇಕು. ತಮ್ಮ ತಾಲೂಕಿನಲ್ಲಿ ಹೊಸ ಕಟ್ಟಡ ಕಾಮಗಾರಿಗಳನ್ನು ಕೂಡಲೇ ಆರಂಭಿಸಲು ಕಾಮಗಾರಿ ಹೊಣೆ ಹೊತ್ತಿರುವ ಅಧಿಕಾರಿಗಳು ಮುಂದಾಗಬೇಕು.
ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ
*ಕೋಟ್
ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಸಭೆಗೆ ಹಾಜರಾಗಿರುವ ಕೆಳ ಹಂತದ ಅಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ. ಕಾಡಿ ಬೇಡಿ ಮಾಹಿತಿ ಪಡೆಯಬೇಕಿದೆ. ಜಿಲ್ಲಾಧಿಕಾರಿಗಳೇ ತಾವು ಗಮನ ಹರಿಸಬೇಕು. 8 ವರ್ಷಗಳಿಂದ ಅಂಗನವಾಡಿ ಕಟ್ಟಡಗಳ ನಿರ್ಮಾಣ ಪೂರ್ಣವಾಗಿಲ್ಲವೆಂದರೆ ಹೇಗೆ? ವೆಚ್ಚ ಅಧಿಕವಾಗುವುದಿಲ್ಲವೇ?
ಬಿ.ಜಿ.ಗೋವಿಂದಪ್ಪ, ಶಾಸಕ, ಹೊಸದುರ್ಗ
*ಕೋಟ್
ಹಿಂದುಳಿದ ಜಿಲ್ಲೆ ಇದು, ಶಿಕ್ಷಣ ಬಿಟ್ಟು ಬೇರೆ ದಾರಿ ಇಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ಮೊದಲ ಸ್ಥಾನ ಪಡೆಯಲು ಈಗಿನಿಂದಲೇ ತಯಾರಿ ನಡೆಸಬೇಕು. ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
ಡಾ.ಎಂ.ಚಂದ್ರಪ್ಪ, ಶಾಸಕ, ಹೊಳಲ್ಕೆರೆ
*ಕೋಟ್
ಸಭೆಗೆ ಗೈರಾಗುವ ಅಧಿಕಾರಿಗಳ ನಡೆ ಸರಿಯಲ್ಲ. ಇವರ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರದ ಮುಖ್ಯಕಾರ‌್ಯದರ್ಶಿಗೆ ಪತ್ರ ಬರೆಯುತ್ತೇನೆ.
ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ
*ಸರ್ಕಾರಿ ಬಾಲಮಂದಿರಕ್ಕೆ ಭೇಟಿ
ನಗರದ ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಬಾಲಮಂದಿರಕ್ಕೆ ಹೆಬ್ಬಾಳ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಅವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಇಲಾಖೆ ನಿರ್ದೇಶಕ ಸಿದ್ದೇಶ್ವರ್, ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಜಿಲ್ಲಾ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್, ತಹಸೀಲ್ದಾರ್ ಡಾ.ನಾಗವೇಣಿ ಇದ್ದರು.
(ಸಿಟಿಡಿ 2 ಮಿನಿಸ್ಟರ್ ಮೀಟಿಂಗ್)
ಚಿತ್ರದುರ್ಗದಲ್ಲಿ ಸೋಮವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪೋಷಣ್ ಅಭಿಯಾನ ಭಿತ್ತಿಪತ್ರ ಬಿಡುಗಡೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಎಂ.ಚಂದ್ರಪ್ಪ, ಡಿಸಿ ಟಿ.ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಇದ್ದರು.
===========