ಜಿಲ್ಲೆ

ಜಿಲ್ಲೆಯಲ್ಲಿ ಪ್ರತ್ಯೇಕ ಎರಡು ಅಪಘಾತ: ಮೂವರು ಸಾವು

ಹಾಸನ: ಕಂಟೈನರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಇಂಜಿನಿಯರ್ ಸೇರಿ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಶಾಂತಿಗ್ರಾಮ ಟೋಲ್
ಬಳಿ ಭಾನುವಾರ ರಾತ್ರಿ ನಡೆದಿದೆ.
ಅರಕಲಗೂಡು ತಾಲೂಕು ಆಲದಹಳ್ಳಿ ಗ್ರಾಮದ ಇಂಜಿನಿಯರ್ ಸಾಗರ್(35) ಹಾಗೂ ಚಿಕ್ಕ ಅರಕಲಗೂಡು ಗ್ರಾಮದ ಅಶ್ವಥ್(43) ಮೃತರು. ಈ ಇಬ್ಬರೂ ಚನ್ನರಾಯಪಟ್ಟಣ ಕಡೆಯಿಂದ ಬೈಕ್‌ನಲ್ಲ್ಲಿ ಹಾಸನ ಕಡೆಗೆ ಬರುತ್ತಿದ್ದರು.ಈ ವೇಳೆ ಜಿಗ್ ಜಾಗ್ ಚಾಲನೆ ಮತ್ತು ಯಾವುದೇ ಮುನ್ಸೂಚನೆ ನೀಡದೆ ಕಂಟೈನರ್ ಚಾಲಕ ಒಮ್ಮೆಲೇ ರಸ್ತೆಯ ಎಡ ಬದಿಯಲ್ಲಿ ಲಾರಿ ನಿಲ್ಲಿಸಿದ್ದಾನೆ.
ಹಿಂಬದಿಯಲ್ಲಿ ಬರುತ್ತಿದ್ದ ಮೋಟಾರು ಬೈಕ್, ಸವಾರನ ನಿಯಂತ್ರಣಕ್ಕೆ ಬಾರದೇ ಕಂಟೈನರ್ ಲಾರಿಗೆ ಗುದ್ದಿದೆ.
ಬೈಕ್‌ನಲ್ಲಿದ್ದ ಇಬ್ಬರಿಗೂ ಪೆಟ್ಟಾಗಿ ರಕ್ತಗಾಯಗಳಾಗಿದ್ದರಿಂದ ಸಮೀಪದಲ್ಲಿಯೇ ಇದ್ದ ಟೋಲ್ ಸಿಬ್ಬಂದಿಯವರು ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಇಬ್ಬರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಶಾಂತಿಗ್ರಾಮ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಕಟ್ಟಾಯ ಬಳಿ ನಡೆದಿದೆ. ಅರಕಲಗೂಡು ತಾಲೂಕು ಹೊನ್ನವಳ್ಳಿ ಕೊಪ್ಪಲು ಗ್ರಾಮದ ರಂಗಸ್ವಾಮಿ(29) ಮೃತ. ಹಾಸನದ ಜಾಕಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಪ್ರತಿದಿನ ಬೈಕಿನಲ್ಲಿ ಬಂದು ಹೋಗುತ್ತಿದ್ದ. ಮಾ.30 ರಂದು ಸಂಜೆ 7.30 ಗಂಟೆ ಸಮಯದಲ್ಲಿ ರಂಗಸ್ವಾಮಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರಲು ಬೀಕನಹಳ್ಳಿ ಗ್ರಾಮದ ಹತ್ತಿರ ಹಾಸನ-ಅರಕಲಗೂಡು ರಸ್ತೆಯಲ್ಲಿ ಬರುತ್ತಿದ್ದಾಗ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.