ಹಾಸನ: ಜಿಲ್ಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಸುಮಾರು 519 ಪ್ರಕರಣಗಳು ಬಾಕಿ ಇದ್ದು, ಪ್ರತಿಯೊಬ್ಬರು ಮಕ್ಕಳ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದ ಕೋಠಿ) ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಸಮಾಜಶಾಸ್ತ್ರ ವಿಭಾಗ, ಫೆವಾರ್ಡ ಹಾಸನ, ಕರ್ನಾಟಕ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಅಂಗವಾಗಿ ಮಾನವ ಕಳ್ಳ ಸಾಗಣೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಹಕ್ಕು ಉಲ್ಲಂಘನೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಯು ಬಾಲ್ಯವಿವಾಹ, ಮಾನವ ಕಳ್ಳ ಸಾಗಣೆ, ಬಿಕ್ಷಾಟನೆ, ಜೀತದಾಳು ಇಂತಹ ಕೃತ್ಯಗಳಿಗೆ ಒತ್ತು ನೀಡಬಾರದು. ಸ್ವಯಂ ರಕ್ಷಣೆಗೆ ಕಾನೂನಿನ ಜ್ಞಾನ ಅವಶ್ಯಕವಾಗಿದ್ದು, ವಿಶೇಷವಾಗಿ ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆ ಕಾನೂನು ತಿಳಿದುಕೊಳ್ಳಬೇಕು. ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾತ್ರ ಪ್ರಮುಖವಾಗಿದ್ದು, ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಸಮಸ್ಯೆಯಲ್ಲಿ ಸಿಲುಕದ ಹಾಗೆ ವಿದ್ಯಾರ್ಥಿಗಳನ್ನು ಪಾರು ಮಾಡುವ ಹಕ್ಕು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ, ವಿದ್ಯಾರ್ಥಿನಿಯರು ಪಠ್ಯದ ಶಿಕ್ಷಣದೊಂದಿಗೆ ನಮ್ಮ ಕಾನೂನು ಸೇವೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ತಮ್ಮ ಹಿರಿಯರಿಗೆ ಹಾಗೂ ಇತರರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಹೆಣ್ಣು ಮಕ್ಕಳ ರಕ್ಷಣೆಯ ಕುರಿತು ದೇಶದಲ್ಲಿ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಫೆವಾರ್ಡ ಹಾಸನ ಜಿಲ್ಲಾಧ್ಯಕ್ಷ ಕಲಾವತಿ ಮಧುಸೂದನ, ಖಜಾಂಚಿ ನಂಜಪ್ಪಶೆಟ್ಟಿ, ಸದಸ್ಯರಾದ ಪೌಲಸ್, ಚಂದ್ರಕಲಾ, ನಗರಸಭಾ ಸದಸ್ಯ ರಕ್ಷಿತ್ ಕುಮಾರ್, ಉಪನ್ಯಾಸಕ ಡಾ.ಜೆ.ಎಸ್. ದಯಾನಂದ ಹಾಗೂ ಇತರರು ಇದ್ದರು.