ಜಿಲ್ಲೆ

ಜಿಲ್ಲೆಯಲ್ಲಿ ಡ್ರೋನ್‌ ಮೂಲಕ ಸರ್ವೇ ಶೀಘ್ರ -ಶತಮಾನದ ಬಳಿಕ ಆಸ್ತಿ ಸಮೀಕ್ಷೆ

ಸುಭಾಸ ಧೂಪದಹೊಂಡ ಕಾರವಾರ
ಶತಮಾನದ ನಂತರ ಜಿಲ್ಲೆಯ ಜಮೀನಿನ ಮರು ಸರ್ವೇಗೆ ಕಾಲ ಕೂಡಿ ಬಂದಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳನ್ನು ಡ್ರೋನ್ ಮೂಲಕ ಮರು ಸಮೀಕ್ಷೆ ನಡೆಸಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಭೂ ದಾಖಲೆಗಳ ಇಲಾಖೆ ಸಿದ್ಧತೆ ನಡೆಸಿದ್ದು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಪಕ್ಕದ ನೂತನ ಆಡಳಿತ ಸೌಧ ಕಟ್ಟಡದಲ್ಲಿ ಅದಕ್ಕಾಗಿ ಕಚೇರಿ ತೆರೆಯಲಾಗುತ್ತಿದೆ.
ತುಮಕೂರು, ಹಾಸನ, ಬೆಳಗಾವಿ, ರಾಮನಗರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಪೂರ್ಣ ಆಸ್ತಿಗಳ ಮರು ಸರ್ವೇ ನಡೆಸಲು 2019 ರಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆಯ ಜತೆ ಆಗಿನ ಕರ್ನಾಟಕ ಸರ್ಕಾರದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಒಪ್ಪಂದ ಮಾಡಿಕೊಂಡಿದ್ದರು. ಮಳೆ, ಕರೊನಾ ಸೇರಿ ವಿವಿಧ ಕಾರಣಗಳಿಂದ ಸರ್ವೇ ಕಾರ್ಯ ನಡೆದಿರಲಿಲ್ಲ. ಈಗ ಆಧುನಿಕ ತಂತ್ರಜ್ಞಾನದೊAದಿಗೆ ಸರ್ವೇ ಹಾಗೂ ದಾಖಲೆಗಳ ಒರ್ಥೋ ರೆಕ್ಟಿಫೈಡ್ ಇಮೇಜಸ್(ಒಆರ್‌ಐಎಸ್) ಎಂದರೆ ಡಿಜಿಟಲ್ ನಕ್ಷೆ ತಯಾರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಭೂ ದಾಖಲೆಗಳ ಇಲಾಖೆ ಆಯುಕ್ತ ಮನೀಶ ಮೌದ್ಗಿಲ್ ನವೆಂಬರ್‌ತಿಂಗಳಲ್ಲಿ ಆದೇಶ ಹೊರಡಿಸಿದ್ದಾರೆ.
ಸರ್ವೇ ಹೇಗೆ ನಡೆಯಲಿದೆ:
ಕೇಂದ್ರ ಸರ್ಕಾರ ಸ್ವಾಮಿತ್ವ ಎಂಬ ಯೋಜನೆಯಡಿ ಗ್ರಾಮೀಣ ಭಾಗದ ಖಾಸಗಿ ಆಸ್ತಿಗಳನ್ನು ಡ್ರೋನ್ ಮೂಲಕ ಸರ್ವೇ ನಡೆಸಿ, ಆಸ್ತಿ ಸಂಖ್ಯೆ ನೀಡುವ ಯೋಜನೆ ಜಾರಿಗೆ ತಂದಿದೆ. ನಗರ ಪ್ರದೇಶದ ಸಂಪೂರ್ಣ ಆಸ್ತಿಗಳ ಸರ್ವೇ ನಡೆಸಿ, ಆಸ್ತಿ ಸಂಖ್ಯೆ ಹಾಗೂ ಕಾರ್ಡ್ ನೀಡಲು ನೀಡಲು ನಗರ ಆಸ್ತಿ ಮಾಲೀಕತ್ವ ದಾಖಲೆ (ಯುಪಿಒಆರ್) ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇವೆರಡೂ ಯೋಜನೆಗಳ ಒಟ್ಟಿಗೇ ಸಂಪೂರ್ಣ ಆಸ್ತಿಗಳ ಮರು ಸರ್ವೇ ಕಾರ್ಯ ನಡೆಸಲು ಈಗ ಕ್ರಮ ವಹಿಸಲಾಗುತ್ತಿದೆ.
ಸಂಬಂಧಪಟ್ಟ ಗ್ರಾಮ ಅಥವಾ ನಗರದ ಒಂದು ವಾರ್ಡ್ನ ನಕಾಶೆಯನ್ನು ಕಂದಾಯ, ಭೂ ದಾಖಲೆಗಳ ಇಲಾಖೆಯಿಂದ ಪಡೆಯಲಾಗುತ್ತದೆ. ಅಲ್ಲದೆ, ಸಂಬಂಧಪಟ್ಟವರಿಂದ ಅವರ ಆಸ್ತಿಗಳ ದಾಖಲೆಗಳನ್ನು ಪಡೆದು, ಪರಿಶೀಲನೆ ನಡೆಸಿ, ಜಮೀನಿನ ಗಡಿಯಲ್ಲಿ ಬಿಳಿ ಬಣ್ಣದಿಂದ ಗುರುತು ಹಾಕಿಕೊಳ್ಳಲಾಗುತ್ತದೆ. ಡ್ರೋನ್ ಮೂಲಕ ಆಸ್ತಿಯ ಫೋಟೋ ತೆಗೆದು ಒಆರ್‌ಐಎಸ್ ನಕ್ಷೆ ತಯಾರಿಸಲಾಗುತ್ತದೆ. ವಿವಾದಿತ ಮತ್ತು, ನ್ಯಾಯಾಲಯಗಳಲ್ಲಿರುವ ಆಸ್ತಿಗಳನ್ನು ನಾವು ಮುಟ್ಟುವುದಿಲ್ಲ ಎಂದು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ರುದ್ರಣ್ಣ ಗೌಡ ತಿಳಿಸಿದ್ದಾರೆ.
102 ವರ್ಷಗಳ ಬಳಿಕ ಸರ್ವೇ
ಬ್ರಿಟಿಷ್ ಸರ್ಕಾರ 1920 ರಲ್ಲಿ ಭಾರತದ ಸಂಪೂರ್ಣ ಆಸ್ತಿಗಳ ಭೌತಿಕ ಸರ್ವೇ ಕಾರ್ಯ ನಡೆಸಿತ್ತು. 1928 ರಿಂದ 1940 ರ ಅವಽಯಲ್ಲಿ ಹಿಸ್ಸಾ ಸರ್ವೇ ಕಾರ್ಯ ನಡೆದು ನಕಾಶೆಗಳನ್ನು ತಯಾರಿಸಲಾಗಿದೆ. 1959 ರಿಂದ 1965 ರ ನಡುವೆ ಆಸ್ತಿಗಳ ಮರು ವರ್ಗೀಕರಣ ನಡೆಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯಿದೆಯ ಪ್ರಕಾರ ಪ್ರತಿ 30 ವರ್ಷಗಳಿಗೊಮ್ಮೆ ಎಲ್ಲ ಆಸ್ತಿಗಳ ಮರು ಸರ್ವೇ ನಡೆಯಬೇಕು. ಆದರೆ, ಶತಮಾನ ಕಳೆದರೂ ಸಂಪೂರ್ಣ ಆಸ್ತಿಗಳ ಸರ್ವೇ ಕಾರ್ಯ ಒಮ್ಮೆಯೂ ನಡೆದಿಲ್ಲ. ಈ ಹಿಂದೆ ಸರ್ವೇ ನಡೆಸಿ ತಯಾರಿಸಿದ ಕೈಯ್ಯಿಂದಲೇ ತಯಾರಿಸಿದ ನಕ್ಷೆಗಳು ಹರಿದು ಚಿಂದಿಯಾಗಿವೆ. ಅವುಗಳನ್ನು ಕಾಪಿಟ್ಟುಕೊಳ್ಳುವುದು ಜನರು ಕೇಳಿದಾಗ ಒದಗಿಸುವುದು ದೊಡ್ಡ ಸವಾಲಾಗಿದೆ. ಈಗ ಜಿಯೋ ರೆಫರೆನ್ಸ್ ಜತೆ ಡ್ರೋನ್ ಮೂಲಕ ಸರ್ವೇ ಮತ್ತಷ್ಟು ನಿಖರವಾಗಿದ್ದು, ಶೀಘ್ರವಾಗಿ ಕಾರ್ಯ ಮುಕ್ತಾಯಗೊಳಿಸಬಹುದಾಗಿದೆ. ಬೆಂಗಳೂರಿನ ಕೆಲ ವಾರ್ಡ್ಗಳು ಹಾಗೂ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಈ ವಿಧಾನದ ಸರ್ವೇ ಯಶಸ್ವಿಯಾಗಿದೆ.
ಸವಾಲುಗಳು:
ಉತ್ತರ ಕನ್ನಡದಲ್ಲಿ ಸಣ್ಣ ಆಸ್ತಿಗಳು ಹೆಚ್ಚಿದ್ದು, ಅವುಗಳಿಗಾಗಿ ವಿವಾದ ಹೆಚ್ಚಿದೆ.ವಿವಾದ ಬದಿಗಿಟ್ಟು ಸಂಪೂರ್ಣ ಆಸ್ತಿ ಸರ್ವೇ ನಡೆಸುವುದು ದೊಡ್ಡ ಸವಾಲಾಗಿದೆ. ಇನ್ನು ಸರ್ವೇ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಜಿಲ್ಲೆಯಲ್ಲಿರಬೇಕಾದ 142 ಸರ್ಕಾರಿ ಸರ್ವೇಯರ್‌ಗಳ ಪೈಕಿ 74 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 55 ಜನ ಲೈಸನ್ಸ್ಡ್ ಸರ್ವೇಯರ್‌ಗಳಿದ್ದಾರೆ. ಜನರ ಅರ್ಜಿಗಳು, ನ್ಯಾಯಾಲಯದ ಆದೇಶಗನ್ನು ಮಾಡುವುದೇ ಕಷ್ಟವಾಗಿದೆ. ಹೀಗಿರುವಾಗ ಹೊಸ ಯೋಜನೆ ಜಾರಿ ಹೇಗೆ ಎಂಬುದು ಇಲಾಖೆಯ ಅಽಕಾರಿಗಳಿಗಿರುವ ಸವಾಲು. ಹೊಸದಾಗಿ 36 ಜನ ಲೈಸನ್ಸ್ಡ್ ಸರ್ವೇಯರ್‌ಗಳನ್ನು ಜಿಲ್ಲೆಗೆ ನೇಮಿಸಿಕೊಳ್ಳಲು ತರಬೇತಿ ನೀಡಲಾಗಿದ್ದು, ಪರೀಕ್ಷೆ ಮುಗಿದಿದೆ. ಅವರನ್ನು ಈ ಸರ್ವೇ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ಸರ್ವೇ ಹಾಗೂ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ರುದ್ರಣ್ಣ ಗೌಡ ತಿಳಿಸಿದ್ದಾರೆ.
ಆಯುಕ್ತರ ಆದೇಶ
*ಪ್ರಾಥಮಿಕ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಒಂದು ಮೇಲ್ವಿಚಾರಣಾ ಕಚೇರಿ ತೆರೆಯಬೇಕು. ಅಲ್ಲಿ ಒಬ್ಬ ಅಧಿಕಾರಿ, ಒಬ್ಬ ಸುಪ್ರವೈಸರ್ ಹಾಗೂ 5 ಲೈಸನ್ಸ್ಡ್ ಸರ್ವೇಯರ್‌ಗಳನ್ನು ಡಿಜಿಟಲೈಜೇಶನ್‌ಗಾಗಿ ನೇಮಿಸಬೇಕು.
*ಪ್ರತಿ ತಾಲೂಕಿನಲ್ಲಿ ಸ್ವಾಮಿತ್ವ ಯೋಜನೆಗೆ 3 ಲೈಸನ್ಸ್ಡ್ ಸರ್ವೇಯರ್ ಒಬ್ಬ ಸರ್ಕಾರಿ ಸರ್ವೇಯರ್ ಹಾಗೂ ಮೂವರು ಸಹಾಯಕರನ್ನು ನೇಮಿಸಬೇಕು.
*ಪ್ರತಿ ತಾಲೂಕಿನಲ್ಲಿ ಯುಪಿಒಆರ್ ಯೋಜನೆಗಾಗಿ ಒಬ್ಬ ಲೈಸನ್ಸ್ಡ್ ಸರ್ವೇಯರ್ ಒಬ್ಬ ಸರ್ಕಾರಿ ಸರ್ವೇಯರ್ ಹಾಗೂ ಇಬ್ಬರು ಸಹಾಯಕರನ್ನು ನೇಮಿಸಬೇಕು.
*ಲೈಸನ್ಸ್ಡ್ ಸರ್ವೇಯರ್‌ಗಳಿಗೆ ಮಾಸಿಕ 25 ಸಾವಿರ ರೂ. ವೇತನ ಪಾವತಿಸಬೇಕು.



ಸ್ವಾಮಿತ್ವ, ನಗರದ ಆಸ್ತಿ ಕಾರ್ಡ್ ಜತೆಗೆ ಜಿಲ್ಲೆಯ ಸಂಪೂರ್ಣ ಆಸ್ತಿಗಳ ಮರು ಸರ್ವೇ ನಡೆಸಲು ಸರ್ಕಾರದಿಂದ ಸೂಚನೆ ಬಂದಿದೆ.
ಸುಮಾರು 102 ವರ್ಷಗಳ ಬಳಿಕ ಜಿಲ್ಲೆಯ ಸಂಪೂರ್ಣ ಆಸ್ತಿಯ ಮರು ಸರ್ವೇ ಕಾರ್ಯ ಆಧುನಿಕ ರೀತಿಯಲ್ಲಿ ತಂತ್ರಜ್ಞಾನ ಬಳಸಿ ನಡೆಯಲಿದೆ. ನಿಖರ ಡಿಜಿಟಲ್ ನಕ್ಷೆ ಸಿದ್ಧವಾಗಲಿದ್ದು, ಸಾಕಷ್ಟು ಸಮಸ್ಯೆಗಳು ಬಗೆಹರಿಯುವ ನಿರೀಕ್ಷೆಯಿದೆ.

ರಾಜು ಮೊಗವೀರ

ಎಡಿಸಿ ಉತ್ತರ ಕನ್ನಡ