ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕರೊನಾ ಹಾವಳಿ ಹಾಗೂ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿ ಖುದ್ದು ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಶುಕ್ರವಾರ ಜಿಲ್ಲೆಯ ಹಲವು ಕಡೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ ಕೋವಿಡ್ ಲಸಿಕೆ ಪಡೆದು ಅಧಿಕಾರಿಗಳಿಗೆ ಮುಂಜಾಗ್ರತಕ್ರಮ ಬಿಗಿಗೊಳಿಸುವಂತೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ ಕರೊನಾ ಲಸಿಕೆ ಸಂಗ್ರಹಣೆ ವಿಧಾನ ಹಾಗೂ ಲಸಿಕೆ ನೀಡುತ್ತಿರುವ ಕಾರ್ಯ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು. ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಜಿಲ್ಲೆಯಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯುವಂತೆ ಅರಿವು ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಪ್ರತಿನಿತ್ಯ 50 ರಿಂದ 70 ಕರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ, ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೊರತೆ ಇಲ್ಲ ಕೇಂದ್ರ ಸರ್ಕಾರದ ಆದೇಶದಂತೆ 45 ವರ್ಷ ಮೇಲ್ಪಟ್ಟ ಜನತೆಗೆ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ಕುರಿತು ಅಗತ್ಯ ಮಾಹಿತಿಯೊಂದಿಗೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದರು.
ಬಸ್ ನಿಲ್ದಾಣಕ್ಕೆ ಭೇಟಿ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕಿನ ಬಸ್ ನಿಲ್ದಾಣಕ್ಕೆ ಬೆಂಗಳೂರು ಭೇಟಿ ನೀಡಿ, ಸಾರಿಗೆ ವ್ಯವಸ್ಥೆ ಪರಿಶೀಲಿಸಿದರು ಹಾಗೂ ಖಾಸಗಿ ಬಸ್ ಚಾಲಕರ ಸಮಸ್ಯೆ ಆಲಿಸಿದರು. ಈ ವೇಳೆ ಬಸ್ ನಿಲ್ದಾಣದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದರು. ಪ್ರಯಾಣಿಕರಿಂದ ಹೆಚ್ಚಿನ ಟಿಕೆಟ್ ದರ ಪಡೆಯದಂತೆ ಖಾಸಗಿ ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರಿಗೆ ಸೂಚನೆ ನೀಡಿದರು. ಖಾಸಗಿ ಬಸ್ ಚಾಲಕರ ಸಮಸ್ಯೆಗಳನ್ನು ಆಲಿಸಿ, ಹೆಚ್ಚಿನ ಟೋಲ್ ಸಂಗ್ರಹಿಸುವ ಬಗ್ಗೆ ದೂರು ಬಂದಿದ್ದು, ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.