ಜಿಲ್ಲೆ

ಜಿಲ್ಲೆಯಲ್ಲಿ ಜಡಿ ಮಳೆಗೆ ಜನ ತತ್ತರ, ವ್ಯಾಪಾರ ವಹಿವಾಟಿಗೆ ತೊಡಕು, ಮಧ್ಯಾಹ್ನದ ಬಳಿಕ ಸಂಪೂರ್ಣ ಸ್ತಬ್ಧ

Bengaluru Rural

ಬೆಂಗಳೂರು ಗ್ರಾಮಾಂತರ: ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ತುಂತುರು ಮಳೆಯಾಗುತ್ತಿದ್ದು, ಬುಧವಾರ ಸಂಜೆ ವೇಳೆಗೆ ಜೋರು ಮಳೆ ಸುರಿದಿದೆ.

ದೊಡ್ಡಬಳ್ಳಾಪುರಕ್ಕೆ ಸೀಮಿತವಾದಂತಿದ್ದ ಮಳೆರಾಯ ಬುಧವಾರ ದೇವನಹಳ್ಳಿ, ಹೊಸಕೋಟೆ ಹಾಗೂ ನೆಲಮಂಗಲ ತಾಲೂಕಿನಲ್ಲೂ ಅಬ್ಬರಿಸಿದ್ದಾನೆ. ಜುಲೈ ಮೊದಲ ವಾರದಿಂದಲೇ ಮಳೆ ಆರಂಭವಾಗಿದ್ದು, ವಾರದಿಂದ ಸುರಿದ ಮಳೆಗೆ ಜಿಲ್ಲೆಯ ಅನೇಕ ಕೆರೆಕಟ್ಟೆಗಳು ಭರ್ತಿಯಾಗಿವೆ. ಅನೇಕ ವರ್ಷದಿಂದ ತುಂಬದ ದೊಡ್ಡಬಳ್ಳಾಪುರ ತಾಲೂಕು ಗುಂಡಮಕೆರೆ ಈ ಬಾರಿ ಭರ್ತಿಯಾಗಿದೆ. ಹಾಗೆಯೇ ತೂಬಗೆರೆ ಹೋಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ವ್ಯಾಪಾರ ವಹಿವಾಟು ಬಂದ್: ಕರೊನಾ ಲಾಕ್‌ಡೌನ್‌ನಿಂದ ಈಗಷ್ಟೇ ಗರಿಗೆದರುತ್ತಿರುವ ವ್ಯಾಪಾರ ವಹಿವಾಟಿಗೆ ಮಳೆರಾಯ ಬ್ರೇಕ್ ಹಾಕಿದ್ದಾನೆ. ಮುಂಜಾನೆಯಿಂದಲೇ ಮೋಡಕವಿದ ವಾತಾವರಣವಿದ್ದ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ತುಂತುರು ಮಳೆ ಆರಂಭವಾಗಿದೆ. ಅರ್ಧರ್ಧ ಗಂಟೆ ತಡೆದು ಸುರಿದ ಜಡಿಮಳೆಗೆ ಬುಧವಾರ ತರಕಾರಿ ಹಾಗೂ ಹಣ್ಣು, ಹೂವು ಮಾರುಕಟ್ಟೆಗಳ ವಹಿವಾಟು ಸ್ಥಗಿತಗೊಂಡಿತು.

ಜಿಲ್ಲಾಡಳಿತ ಸಿಬ್ಬಂದಿ ಪರದಾಟ: ಕಚೇರಿ ಬಿಡುವ ಸಮಯಕ್ಕೆ ಸುರಿದ ಜೋರು ಮಳೆಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನ ಸಿಬ್ಬಂದಿ ಮನೆ ಸೇರಲು ಪರದಾಡುವಂತಾಯಿತು. ಈ ಭಾಗದಲ್ಲಿ ಬಸ್ ಶೆಲ್ಟರ್ ಇಲ್ಲದೆ ಸಿಬ್ಬಂದಿ ಮಳೆಯಲ್ಲಿ ನೆನೆದುಕೊಂಡೆ ಬಸ್ ಹತ್ತುತ್ತಿದ್ದ ದೃಶ್ಯ ಕಂಡುಬಂತು.

ರಸ್ತೆಗಳು ಜಲಾವೃತ: ಬಿರುಸಿನ ಮಳೆಗೆ ಮೋರಿಗಳ ನೀರು ಉಕ್ಕಿ ಹರಿದು ರಸ್ತೆಗಳು ಜಲಾವೃತಗೊಂಡವು. ನೀರು ತುಂಬಿದ್ದ ಗುಂಡಿಗಳಲ್ಲೇ ವಾಹನ ಸವಾರರು ಸರ್ಕಸ್ ಮಾಡಿ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.