ಜಿಲ್ಲೆ

ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ

ವಿಜಯವಾಣಿ ಸುದ್ದಿಜಾಲ ತುಮಕೂರು
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಬುಧವಾರ ಸುದ್ದಿಗೋಷ್ಠಿ ನಡೆಸಿ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ 2683 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. 22,27,402 ಒಟ್ಟು ಮತದಾರರು ಇದ್ದು 11,11,221 ಪುರುಷ ಮತದಾರರು, 11,16,077 ಮಹಿಳಾ ಮತದಾರರು, ತೃತೀಯ ಲಿಂಗಿಗಳು 104 ಜನರಿದ್ದು ಶೇ.100 ಮತದಾನವಾಗಬೇಕು ಎಂಬ ಗುರಿ ಹೊಂದಲಾಗಿದೆ. ಈ ಪೈಕಿ 42737 ಯುವ ಜನರು ಇದೇ ಮೊದಲ ಸಲ ಜಿಲ್ಲೆಯಲ್ಲಿ ಮತದಾನ ಮಾಡಲಿದ್ದಾರೆ ಇವರಿಗಾಗಿಯೇ ಪ್ರತ್ಯೇಕ ಬೂತ್ ನಿರ್ಮಿಸಲಾಗುವುದು ಎಂದರು.
ಅಕ್ರಮ ವಹಿವಾಟು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 45 ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ, ಹೊರ ರಾಜ್ಯದ ಸಂಪರ್ಕದ 12 ಚೆಕ್‌ಪೋಸ್ಟ್, ಹೊರ ಜಿಲ್ಲೆಯ 17 ಜತೆಗೆ ಜಿಲ್ಲೆಯ ಒಳಗೆ 16 ಚೆಕ್‌ಪೋಸ್ಟ್ ನಿರ್ಮಿಸಿ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.
ಜಿಲ್ಲೆಯ 2683 ಮತಗಟ್ಟೆಗಳಲ್ಲಿ 507 ಮತಗಟ್ಟೆಗಳು ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಶಾಂತಿಯುತ ಹಾಗೂ ಸುವ್ಯವಸ್ಥಿತ ಮತದಾನಕ್ಕೆ ಅನುಕೂಲವಾಗುವಂತೆ 19 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಮಹಿಳಾ ಮತಗಟ್ಟೆ, ವಿಕಲಚೇತನ, ಹಾಗೂ ಯುವ ಮತಗಟ್ಟೆಗಳ ಸ್ಥಾಪಿಸಲು ಕ್ರಮವಹಿಸಲಾಗಿದೆ. ಚುನಾವಣಾ ದೂರುಗಳಿಗೆ ಸಂಬಂಧಿಸಿದಂತೆ ಆಯಾ ಕ್ಷೇತ್ರದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಶಾಂತಿಯುತ ಚುನಾವಣೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಇದ್ದರು.
ಅಂಗವಿಕಲರು, ಹಿರಿಯ ನಾಗರಿಕರಿಗೆ ಅಂಚೆ ಮತಕ್ಕೆ ಅವಕಾಶ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಂಗವಿಕಲರಿಗೆ ಮತ್ತು 80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 29720 ವಿಕಲಚೇತನ ಮತದಾರರು, 80 ವರ್ಷ ಮೇಲ್ಪಟ್ಟ 55827 ಮತದಾರರು ಒಟ್ಟು 85547 ಮತದಾರರು ಅಂಚೆ ಮೂಲಕ ಮತದಾನ ಮಾಡಲು ಅವಕಾಶವಿದ್ದು, ನಮೂನೆ-12ಡಿ ಅರ್ಜಿ ಸಲ್ಲಿಸಿ ಅಂಚೆ ಮತಪತ್ರಗಳನ್ನು ಪಡೆಯಬಹುದು.
ಪ್ರಚಾರಕ್ಕೆ ಅಡ್ಡಿಯಿಲ್ಲ ವದಂತಿಗೆ ಅಡ್ಮಿನ್ ಹೊಣೆ: ಮಾದರಿ ನೀತಿ ಸಂಹಿತೆಯಂತೆ ಸಾಮಾಜಿಕ ಜಾಲತಾಣಗಳ ಮೇಲೂ ವಿಶೇಷ ನಿಗಾ ವಹಿಸಲಾಗಿದೆ. ವಾಟ್ಸ್‌ಆಪ್, ಫೇಸ್‌ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ವದಂತಿಗಳನ್ನು ಹಬ್ಬಿಸಿದರೆ ಹಾಕಿದವರ ಜತೆಗೆ ಗ್ರೂಪ್ ಅಡ್ಮಿನ್‌ಗಳನ್ನು ಕೂಡ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.
22 ಯುವ ಮತಗಟ್ಟೆ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ಮತಗಟ್ಟೆಗಳಂತೆ ಒಟ್ಟು 22 ಮತಗಟ್ಟೆಗಳನ್ನು ಯುವ ಅಧಿಕಾರಿಗಳ ಮತಗಟ್ಟೆ ಎಂದು ಇದೇ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ತಲಾ 5 ಮತಗಟ್ಟೆಗಳಂತೆ 55 ಮಹಿಳಾ ಮತಗಟ್ಟೆಗಳು, ತಲಾ 1 ಮತಗಟ್ಟೆಗಳಂತೆ 11 ಮತಗಟ್ಟೆಗಳು ಅಂಗವಿಕಲರಿಗಾಗಿ ಸ್ಥಾಪಿಸಲಾಗುತ್ತಿದೆ. 507 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಾಗಿರುವ ಸೂಕ್ತ ಪೊಲೀಸ್ ಬಂದೂಬಸ್ತ್ ಮಾಡಲಾಗುತ್ತಿದೆ.
ಪಕ್ಷಗಳ ಫ್ಲೆಕ್ಸ್, ಬ್ಯಾನರ್ಸ್‌, ಪೋಸ್ಟರ್ಸ್‌ ತೆರವು
ತುಮಕೂರು: ಭಾರತ ಚುನಾವಣಾ ಆಯೋಗ ರಾಜ್ಯ ವಿಧಾನಸಭೆಗೆ ವೇಳಾಪಟ್ಟಿ ಘೋಷಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ ಜಿಲ್ಲಾ ಚುನವಣಾಧಿಕಾರಿ ವೈ.ಎಸ್.ಪಾಟೀಲ ಸಮನ್ವಯತೆ ಮೂಲಕ ಒಂದು ತಂಡವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಆರ್‌ಒ, ಎಆರ್‌ಒ, ಪೊಲೀಸ್, ಜಿಪಂ, ನೋಡಲ್ ಅಧಿಕಾರಿಗಳು ಸೇರಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಎಲ್ಲ ಅಧಿಕಾರಿ, ಸಿಬ್ಬಂದಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆನ್‌ಲೈನ್ ಮೂಲಕ ಅಧಿಕಾರಿಗಳ ಜಜತೆ ಸಭೆ ನಡೆಸಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ-2023ರ ಹಿನ್ನೆಲೆ ಕೈಗೊಳ್ಳಬೇಕಾದ ಕ್ರಮ ಕುರಿತು ಚರ್ಚಿಸಿದರು.
ಸಾರ್ವಜನಿಕ ಸ್ಥಳದಲ್ಲಿರುವ ಎಲ್ಲ ರಾಜಕೀಯ ಫ್ಲೆಕ್ಸ್, ಬ್ಯಾನರ್ಸ್‌, ಪೋಸ್ಟರ್ಸ್‌, ಹೆದ್ದಾರಿ ಫಲಕಗಳ ಜಾಹೀರಾತುಗಳು, ಗೋಡೆ ಬರಹಗಳನ್ನು ತಕ್ಷಣವೇ ತೆರವುಗೊಳಿಸಲು ಸೂಚನೆ ನೀಡಿದರು.
ವಿವಿಧ ಇಲಾಖೆಗಳ ನಡುವೆ ಸಮನ್ವಯ ಅತಿಮುಖ್ಯ, ಎಲ್ಲ ಇಲಾಖೆಯ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ಡಿಸಿಪಿ ಹಾಗೂ ಉಪವಿಭಾಗಾಧಿಕಾರಿಗಳ ಮಟ್ಟದಲ್ಲೇ ಸಮಸ್ಯೆಗಳು ಬಗೆಹರಿಯಬೇಕು ಎಂದರು.
ತುರ್ತು ಕಾಮಗಾರಿಗಳನ್ನು ಹೊರತುಪಡಿಸಿ, ಇತರ ಇಲಾಖೆಗಳಲ್ಲಿ ಪ್ರಾರಂಭವಾಗದಿರುವ ಕಾಮಗಾರಿಗಳನ್ನು ಯಾವ ಸ್ಥಿತಿಯಲ್ಲಿದೆಯೋ ಆ ಸ್ಥಿತಿಯಲ್ಲಿಯೇ ನಿಲ್ಲಿಸಬೇಕು. ಉಚಿತ ಉಡುಗೊರೆ ಪ್ರಕರಣಗಳನ್ನು ನಿಯಮಾನುಸಾರ ದಾಖಲಿಸಬೇಕು ಎಂದರು.


ಚುನಾವಣಾ ಪ್ರಚಾರ ಸಂಬಂಧ ಅನುಮತಿ ನೀಡುವಲ್ಲಿ ವಿಳಂಬ ಮಾಡಬಾರದು. ರಾಜಕೀಯ ಮಾಡಬಾರದು. ಮೊದಲು ಬಂದ ಅರ್ಜಿಗೆ ಆದ್ಯತೆ ನೀಡಬೇಕು. ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಸೈಲೆಂಟ್ ಅವರ್ಸ್‌(ನಿಶಬ್ದ ಸಮಯ) ಎಂದು ತಿಳಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ಕಾರ್ಯಕ್ರಮಗಳು ಬೇಡ ಎಂದು ಸೂಚಿಸಿದರು.
ಇವಿಎಂ ರ‌್ಯಾಂಡಮೈೇಷನ್ ಇನ್ನು ಎರಡು ದಿನಗಳಲ್ಲಿ ಮಾಡಲಾಗುತ್ತದೆ. ಆರ್‌ಒಗಳ ಸ್ಟ್ರಾಂಗ್ ರೂಂ ಸಿದ್ದಪಡಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ಮತ್ತಿತರರು ಇದ್ದರು.
ಚೆಕ್‌ಪೋಸ್ಟ್‌ಗಳಲ್ಲಿ ಹೈ ಅಲರ್ಟ್: ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆ ಸಮರ್ಪಕವಾಗಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಪೊಲೀಸ್ ಠಾಣೆಗಳಲ್ಲಿ ಯಾವುದೇ ರಾಜಕೀಯ ಸಂಬಂಧಿತ ಪೋಸ್ಟರ್‌ಗಳಿದ್ದಲ್ಲಿ ತೆಗೆಯುವುದು. ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳೊಡನೆ ಸಂಪರ್ಕ ಅಥವಾ ಒಲವು ಬೇಡ. ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಸೂಚಿಸಿದರು. ಪೋಸ್ಟಲ್ ಬ್ಯಾಲೆಟ್ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದು. 10ಲಕ್ಷ ರೂ. ಮೇಲ್ಪಟ್ಟ ನಗದು ಅಥವಾ ಬಿಲ್ ಇಲ್ಲದೆ ಸಾಗಿಸುವ ವಸ್ತುಗಳ ಕುರಿತು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ತಿಳಿಸಬೇಕು. 24 ಗಂಟೆ ಫೋನ್ ಕರೆ ಸ್ವೀಕರಿಸಬೇಕು. ಆಯುಧಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಗಿಸಬೇಕು ಎಂದರು.
ತೆರವು ಕಾರ್ಯಾಚರಣೆ: ಜಿಲ್ಲೆಯೆಲ್ಲೆಡೆ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ರಾಜಕೀಯ ವ್ಯಕ್ತಿ, ಪಕ್ಷಗಳ ಬ್ಯಾನರ್, ್ಲ್ಲೆಕ್ಸ್‌ಗಳ ತೆರವು ಕಾರ್ಯಾಚರಣೆಯನ್ನು ಆಯಾ ಸ್ಥಳೀಯ ಸಂಸ್ಥೆಗಳು ಆರಂಭಿಸಿವೆ. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಎಲ್ಲೆಡೆಯೂ ಟ್ರಾಕ್ಟರ್‌ಗಳಲ್ಲಿ ಕಸದ ವಾಹನಗಳಲ್ಲಿ ತುಂಬಿಕೊಂಡು ತೆರಳಿದರು. ರಾಜಕೀಯ ಪಕ್ಷದ ಬ್ಯಾನರ್‌ಗಳನ್ನು ಕಸದ ರಾಶಿರಾಶಿಗಳನ್ನು ಹೊರಗೆ ಕೊಂಡೊಯ್ದು ನಾಶಪಡಿಸಲಾಯಿತು.