ಕಾರವಾರ: ಎರಡನೇ ಹಂತದ ಲಾಕ್ ಡೌನ್ ಘೊಷಣೆಯಾದ ನಂತರ ಉತ್ತರ ಕನ್ನಡದಲ್ಲಿ ನಿಯಮಾವಳಿಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ. ಈ ಸಂಬಂಧ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಸುತ್ತೋಲೆ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕರೊನಾ ಹೊಸ ಪ್ರಕರಣ ಕಂಡು ಬರದೇ ಇದ್ದರೂ ಪಕ್ಕದ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಬೆಳೆಯುತ್ತಿರುವುದರಿಂದ ಜಿಲ್ಲೆಯ ಗಡಿಗಳನ್ನು ಬಿಗಿಗೊಳಿಸಲಾಗಿದೆ.
ಅನುಮತಿ ಪಡೆಯದೇ ಹೊರ ಜಿಲ್ಲೆಗಳಿಂದ ಬರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಕಳೆದ ಮೂರು ದಿನದಲ್ಲಿ ಐದಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೊರ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಪಾಸ್ ಪಡೆದು ಬಂದಿದ್ದರೂ ಸೀಲ್ ಹಾಕಿ ಹೋಂ ಕ್ವಾರಂಟೈನ್ಗೊಳಪಡಿಸಲಾಗುತ್ತಿದೆ. ಶಿರಸಿಯಲ್ಲಿ ಮದುಮಗನೊಬ್ಬನಿಗೆ ಕ್ವಾರಂಟೈನ್ ಸೀಲ್ ಹೊಡೆದ ಘಟನೆ ನಡೆದಿದೆ.
ಗಸ್ತಿಗೆ 16 ಹೊಸ ವಾಹನ: ಜಿಲ್ಲೆಯಲ್ಲಿ ಬೇರೆ ಇಲಾಖೆಗಳ 16 ವಾಹನಗಳನ್ನು ಪೊಲೀಸ್ ಇಲಾಖೆ ಪಡೆದುಕೊಂಡು ಗಸ್ತು ಪ್ರಾರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 68 ಗಸ್ತು ವಾಹನಗಳು ಓಡಾಟ ಪ್ರಾರಂಭಿಸಿವೆ. ಮಾಜಾಳಿಯ ಕಾರವಾರ-ಗೋವಾ ಅಂತಾರಾಜ್ಯ ಗಡಿಯಲ್ಲಿ ಹೆಚ್ಚುವರಿಯಾಗಿ ಡಿಎಆರ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಗಡಿಗಳಲ್ಲಿ ಪೊಲೀಸ್ ಜತೆ ಕಂದಾಯ ಅಥವಾ ಇತರೆ ಇಲಾಖೆ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ತನಿಖಾ ಠಾಣೆ ಬಿಟ್ಟು ಜಿಲ್ಲೆಗೆ ಬರಬಹುದಾದ ಇತರ ಮಾರ್ಗಗಳನ್ನು ಗುರುತಿಸಿ ಅಲ್ಲೂ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಸಮುದ್ರ, ರೈಲ್ವೆ ಟ್ರಾಕ್ಗಳ ಮೂಲಕ ಬರುವವರನ್ನೂ ಗುರುತಿಸಿ ತಡೆಯಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ವಾಣಿಜ್ಯ ಸರಕು ವಾಹನದಲ್ಲಿ ಪ್ರಯಾಣಿಕರ ಸಾಗಣೆಗೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ತನಿಖಾ ಠಾಣೆಯಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಹೊರ ಜಿಲ್ಲೆಯಿಂದ ಬರುವ ಅಥವಾ ಹೋಗಿ ಬರುವವರ ಸಂಚಾರ ಪರವಾನಗಿ ಪತ್ರದ ಸತ್ಯಾಸತ್ಯತೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಆಂಬುಲೆನ್ಸ್ ಚಾಲಕರು, ತೀವ್ರತರದ ಕಾಯಿಲೆ ಇರುವವರನ್ನು ಹೊರತುಪಡಿಸಿ ಹೊರ ಜಿಲ್ಲೆಯಿಂದ ಬರುವ ಪ್ರತಿಯೊಬ್ಬರ ಜ್ವರ ಪರೀಕ್ಷೆ ಕಡ್ಡಾಯ ಮಾಡುವುದು. ಜ್ವರ ತಪಾಸಣೆ ಮಾಡದೇ ಇದ್ದಲ್ಲಿ, ಕ್ವಾರಂಟೈನ್ ಮುದ್ರೆ ಹೊಂದದೇ ಇದ್ದಲ್ಲಿ ಜ್ವರ ತಪಾಸಣೆ ಮಾಡುವುದಲ್ಲ. ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಓಡಾಡುವವರಿಗೂ ಕ್ವಾರಂಟೈನ್ ಸೀಲ್ ಹಾಕುವುದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪಾಸ್ಗೆ ಪರದಾಟ: ಲಾಕ್ ಡೌನ್ ಅವಧಿ ವಿಸ್ತರಣೆಯಾಗುತ್ತಿದ್ದಂತೆ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳಲು ವಿವಿಧ ಕಾರಣಗಳಿಗಾಗಿ ಜನ ತಹಸೀಲ್ದಾರ್, ಎಸಿ, ಜಿಲ್ಲಾಧಿಕಾರಿ ಕಚೇರಿಯನ್ನು ಎಡತಾಕುತ್ತಿದ್ದಾರೆ. ಸಾವು, ಹುಟ್ಟು ಅಥವಾ ಗಂಭೀರ ರೋಗದ ತುರ್ತು ಚಿಕಿತ್ಸೆ ಬಿಟ್ಟು ಬೇರೆಯವರಿಗೆ ಪಾಸ್ ನೀಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೂ ದಿನವೂ ಸಾಕಷ್ಟು ಜನರು ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಎಲ್ಲರ ಅರ್ಜಿ ಪಡೆದ ಅಧಿಕಾರಿಗಳು ಇಂದು ಹೇಳಲಾಗುವುದು, ನಾಳೆ ಹೇಳಲಾಗುವುದು ಎಂದು ಸಾಗ ಹಾಕುತ್ತಿದ್ದಾರೆ.
ಸಮಸ್ಯೆಗಳು ಹೆಚ್ಚಳ: ಮೊದಲ ಲಾಕ್ ಡೌನ್ ಅನ್ನು ಹೇಗೋ ಜನ ಕಳೆದಿದ್ದಾರೆ. ಎರಡನೇ ಲಾಕ್ ಡೌನ್ ಈಗ ಜನರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಆರೋಗ್ಯ, ಬ್ಯಾಂಕ್, ಸರ್ಕಾರಿ ನೌಕರರು ಸೇರಿ ಹೊರ ತಾಲೂಕುಗಳಿಂದ ಓಡಾಟ ನಡೆಸುತ್ತಿದ್ದ ತುರ್ತು ಸೇವಾ ನಿರತರು ಸಮಸ್ಯೆ ಎದುರಿಸುತ್ತಿದ್ದಾರೆ. ಬಸ್, ಆಟೋದಂತಹ ಸಾರ್ವಜನಿಕ ವಾಹನ ವ್ಯವಸ್ಥೆ ಇಲ್ಲದ ಕಾರಣ ಕೆಲವು ಉದ್ಯೋಗಿಗಳು 30, 40 ಕಿಮೀ ದೂರಗಳಿಂದ ತಮ್ಮ ಬೈಕ್ನಲ್ಲಿ ದಿನವೂ ಬಂದು ಹೋಗುತ್ತಿದ್ದಾರೆ. ಅವರಿಗೆ ಪೆಟ್ರೋಲ್ ವ್ಯವಸ್ಥೆ ಸಿಗುತ್ತಿದೆಯಾದರೂ ಬೈಕ್ ರಿಪೇರಿ ಗ್ಯಾರೇಜ್ಗಳಿಲ್ಲ. ಗಾಲಿಗೆ ಗಾಳಿ ಕಡಿಮೆಯಾದರೂ ನೋಡುವವರಿಲ್ಲವಾಗಿದೆ. ಊರಿನಿಂದ ಬಂದರೆ ಇಲ್ಲಿ ಮಧ್ಯಾಹ್ನದ ಊಟಕ್ಕೂ ಕ್ಯಾಂಟೀನ್ ಇಲ್ಲ. ಇದರಿಂದ ಸಣ್ಣಪುಟ್ಟ ಅಂಶಗಳಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಎರಡನೇ ಹಂತದ ಕಾರ್ವಿುಕರಿಗೆ ಬಿಸಿ: ದಿನವೂ ದುಡಿದು ದಿನವೂ ಊಟ ಮಾಡುವ ಕೂಲಿ ಕಾರ್ವಿುಕರಿಗೆ ಮೊದಲ ಹಂತದ ಲಾಕ್ ಡೌನ್ನಲ್ಲೇ ನೇರವಾಗಿ ಸಂಕಷ್ಟ ಎದುರಾಗಿತ್ತು. ಕೆಲವರಿಗೆ ಸರ್ಕಾರ ಸಹಾಯ ಮಾಡಿದರೆ, ಇನ್ನು ಕೆಲವರಿಗೆ ದಾನಿಗಳು ಸಹಾಯ ಮಾಡಿದ್ದಾರೆ. ಆದರೆ, ಇದರ ನಡುವೆಯೂ ಜನ ಇಲ್ಲಿರಲಾಗದೆ, ತಮ್ಮ ಊರಿಗೂ ಹೋಗಲಾರದೇ ಪರಿತಪಿಸುತ್ತಿದ್ದಾರೆ.
ಈಗ ಎರಡನೇ ಹಂತಲ್ಲಿ ಲಾಕ್ ಡೌನ್ ಮುಂದುವರಿದಿದ್ದರಿಂದ ತಿಂಗಳ ಪಗಾರ ಪಡೆಯುವ ಕಾರ್ವಿುಕರಿಗೆ ಬಿಸಿ ತಟ್ಟಲಾರಂಬಿಸಿದೆ. ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುವವರು, ಹೋಟೆಲ್ನಲ್ಲಿ ಕಾರ್ಯನಿರ್ವಹಿಸುವವರು. ಟೇಲರ್ಗಳು, ರಿಕ್ಷಾ ಚಾಲಕರು, ಕಾರ್ಪೆಂಟರ್, ಇಲೆಕ್ಟ್ರಿಕಲ್, ಪ್ಲಂಬಿಂಗ್ ಹೀಗೆ ವಿವಿಧ ವೃತ್ತಿ ಮಾಡುವ ಅಸಂಘಟಿತ ಕಾರ್ವಿುಕರಿಗೆ ದುಡಿಮೆಯಿಲ್ಲದೆ ಸಮಸ್ಯೆ ಎದುರಾಗಿದೆ. ಬೇರೆಯವನ್ನು ಬೇಡಿ ತಿನ್ನುವಷ್ಟು ಬಡವರಲ್ಲ. ಆದರೆ, ಮನೆಯಲ್ಲಿ ಊಟ, ತಿಂಡಿಗೆ ಬೇಕಾದಷ್ಟಿಲ್ಲ ಎಂಬ ಪರಿಸ್ಥಿತಿ ಇವರದ್ದು.
ಆರೋಗ್ಯ ಸಮಸ್ಯೆ ಉಲ್ಬಣ: ಆಂಬುಲೆನ್ಸ್ನಲ್ಲಿ ಓಡಾಡುವಂಥ ಗಂಭೀರ ಆರೋಗ್ಯ ಸಮಸ್ಯೆ ಇದ್ದಲ್ಲಿ ಮಾತ್ರ ಹೊರ ಜಿಲ್ಲೆ ಅಥವಾ ತಾಲೂಕಿಗೆ ಓಡಾಡಲು ಪಾಸ್ ನೀಡಲಾಗುತ್ತಿದೆ. ಆದರೆ, ಹೊರ ಜಿಲ್ಲೆ, ತಾಲೂಕುಗಳಿಂದ ತಿಂಗಳ ಔಷಧ ತರಿಸಿಕೊಳ್ಳುವವರು. ಪ್ರತಿ ತಿಂಗಳು ವೈದ್ಯರ ಬಳಿ ಚೆಕ್ಅಪ್ಗೆ ತೆರಳುವವರು ಮುಂತಾದವರಿಗೆ ತೊಂದರೆಯಾಗುತ್ತಿದೆ. ಪ್ಯಾರಾಲಿಸಿಸ್, ಬಿಪಿ, ಶುಗರ್ ಹೀಗೆ ವಿವಿಧ ಸಮಸ್ಯೆ ಇರುವವರು ಬೇಕಾದ ಔಷಧ, ಚಿಕಿತ್ಸೆ ಸಿಗದೇ ಪರಿತಪಿಸುತ್ತಿದ್ದಾರೆ. ಹೆರಿಗೆ ಸಮಯದಲ್ಲಿ ಹೆತ್ತಮ್ಮನನ್ನು ಊರಿಂದ ಕರೆಸಿಕೊಳ್ಳಲಾಗದೇ ಹಲವು ಹೆಣ್ಮಕ್ಕಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ವೃದ್ಧ ತಂದೆ ತಾಯಿಯನ್ನು ಹೊಂದಿದವರದ್ದೂ ಇನ್ನೊಂದು ಸಮಸ್ಯೆಯಾಗಿದೆ.
ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಲಾಕ್ ಡೌನ್ ನಿಯಮಾವಳಿಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಜನರು ಹೊರಗೆ ಓಡಾಡುವುದು ಕಂಡುಬಂದಲ್ಲಿ ಕ್ರಮ ವಹಿಸಲಾಗುವುದು. | ಶಿವ ಪ್ರಕಾಶ ದೇವರಾಜು ಎಸ್ಪಿ
ಸ್ವಲ್ಪ ಎಚ್ಚರ ತಪ್ಪಿದರೂ ಕರೊನಾ ವೈರಸ್ ಎಲ್ಲೆಡೆ ವ್ಯಾಪಿಸಲಿದೆ. ಪಕ್ಕದ ಜಿಲ್ಲೆಗಳಲ್ಲೂ ಪ್ರಕರಣ ಹೆಚ್ಚುತ್ತಿದೆ. ಜಿಲ್ಲೆಯ ಜನ ಇದನ್ನು ಅರ್ಥ ಮಾಡಿಕೊಂಡು ಲಾಕ್ ಡೌನ್ ನಿಯಮ ಪಾಲಿಸಿ. | ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ