*ಸಿಮ್ಸ್ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಅಭಯ
*ಎಚ್ಚರಿಕೆಯಿಂದ ಇರುವಂತೆ ಸಲಹೆ
ಚಾಮರಾಜನಗರ: ರಾಜ್ಯದಲ್ಲಿ ಹಲವಾರು ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದಂತೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆ ಸೂಚನೆ ನೀಡಿದೆ.
ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯ(ಸಿಮ್ಸ್) ಡೀನ್ ಹಾಗೂ ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ಅವರು ಜಿಲ್ಲೆಯ ಜನರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಮೊದಲ ಮೂರು ಕೋವಿಡ್ ಅಲೆಗೆ ಹೋಲಿಸಿದರೆ 2025ನೇ ಸಾಲಿನಲ್ಲಿ ಕಂಡು ಬಂದಿರುವ ಕೋವಿಡ್ ತಳಿ ಎನ್.ಬಿ-1.8.1 ಹಾಗೂ ಎಲ್.ಎಫ್-7 ತೀವ್ರ ತೊಂದರೆ ಉಂಟು ಮಾಡುವಂತಹ ತಳಿಯಾಗಿರುವುದಿಲ್ಲ. ಹೀಗಾಗಿ ಈಗ ಕಂಡುಬಂದಿರುವ ಕೋವಿಡ್ ತಳಿಯ ಬಗ್ಗೆ ಆತಂಕ ಪಡದೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ಮೋಡಕವಿದ ವಾತಾವರಣ ಇರುವುದರಿಂದ ಶೀತ, ಕೆಮ್ಮು, ಜ್ವರದಿಂದ ಹಲವಾರು ಜನರು ಬಳಲುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನೇ ಕೋವಿಡ್ ಎಂದು ಭಾವಿಸಿಕೊಂಡು ಭಯಪಡುವ ಅಗತ್ಯವಿಲ್ಲ. ಆದರೇ ಈ ಕುರಿತು ಎಚ್ಚರಿಕೆಯನ್ನು ವಹಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ಸಿಮ್ಸ್ ನಿಂದ ಹಲವು ಸಲಹೆ:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಿಮ್ಸ್ ಆಸ್ಪತ್ರೆಯಿಂದ ಹಲವು ಸಲಹೆಗಳನ್ನು ನೀಡಲಾಗಿದೆ. ಅದರಂತೆ ಜನಸಂದಣಿಯ ಸ್ಥಳಗಳಲ್ಲಿ ಅನಾವಶ್ಯಕವಾಗಿ ಗುಂಪು ಸೇರಬಾರದು. ಜನ ದಟ್ಟಣೆಯಿಂದ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ವಚ್ಚತೆ ಕಾಪಾಡಬೇಕು. ಅನಾರೋಗ್ಯ ಕಂಡು ಬಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸೂಕ್ತವಲ್ಲ. ತಂಪು ಪಾನೀಯ ಮತ್ತು ರೆಫ್ರಿಜರೇಟರ್‌ಗಳಲ್ಲಿ ಶೇಖರಿಸಿದ ಆಹಾರವನ್ನು ಸೇವಿಸಬಾರದು. ಗರ್ಭಿಣಿಯರು, ವೃದ್ದರು, ಹೃದ್ರೋಗಿಗಳು, ಕಿಡ್ನಿ ವೈಫಲ್ಯ ಇರುವವರು, ಕ್ಯಾನ್ಸರ್, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ, ನರದೌರ್ಬಲ್ಯ ಇರುವವರು ಹಾಗೂ ಇನ್ನಿತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮಾಸ್ಕ್ ಧರಿಸಬೇಕು. ಮಕ್ಕಳು ಯಾವುದೇ ಆತಂಕ ಪಡದೇ ಎಚ್ಚರಿಕೆಯಿಂದ ಇರಬೇಕು.ಅದಾಗ್ಯೂ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆಗಳನ್ನು ನಿರ್ಲಕ್ಷ್ಯಿಸದೇ ತುರ್ತಾಗಿ ವೈದ್ಯರ ಸಲಹೆ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಸಿಮ್ಸ್ ನಲ್ಲಿ ಅಗತ್ಯ ಸಿದ್ಧತೆ: ಈ ಬಾರಿ ಕಂಡುಬರುವ ಕೋವಿಡ್ ತಳಿ ಯಾವುದೇ ತೊಂದರೆಗಳನ್ನು ಉಂಟು ಮಾಡದಿದ್ದರೂ, ಯಾವುದೇ ಸಂದರ್ಭದಲ್ಲಿ ಸಮಸ್ಯೆ ಎದುರಾದರು ಸಿಮ್ಸ್ ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಕೋವಿಡ್ ಗೆ ಸಂಬಂಧಿಸಿದಂತೆ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಅಗತ್ಯವಾದ ಐಸಿಯು, ವೆಂಟಿಲೇಟರ್, ಆಕ್ಸಿಜನ್, ಔಷಧ ಹಾಗೂ ಅಗತ್ಯವಾದ ವೈದ್ಯರು ಲಭ್ಯವಿದೆ. ಆಗಾಗಿ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಬಾರಿ ಮೈಸೂರಿನಲ್ಲೇ ಕೋವಿಡ್ ಟೆಸ್ಟಿಂಗ್ ಅವಕಾಶ ಮಾಡಿಕೊಡಲಾಗಿದ್ದು, ಇದು ಕೂಡ ಅನುಕೂಲವಾಗಲಿದೆ. ಒಟ್ಟಾರೆಯಾಗಿ ಸಿಮ್ಸ್ ಆಸ್ಪತ್ರೆ ವತಿಯಿಂದ ಕೋವಿಡ್ ಸಂಬಂಧ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಮ್ಸ್ ಧೈರ್ಯ ತುಂಬಿದೆ.
ಜಿಲ್ಲೆಯ ಜನರು ಕೋವಿಡ್ ಸಂಬಂಧ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅದರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಮಕ್ಕಳು ಯಾವುದೇ ಭಯ ಪಡಬೇಕಿಲ್ಲ. ಯಾವುದೇ ಸಂದರ್ಭವನ್ನು ಎದುರಿಸಲು ಸಿಮ್ಸ್ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. -ಡಾ.ಎಚ್.ಜಿ.ಮಂಜುನಾಥ್, ಡೀನ್ ಮತ್ತು ನಿರ್ದೇಶಕ, ಸಿಮ್ಸ್, ಚಾಮರಾಜನಗರ