ಜಿಲ್ಲೆ

ಜಿಲ್ಲೆಯಲ್ಲಿ ಕೊರೆದ ಶೇ.30 ರಷ್ಟು ಕೊಳವೆ ಬಾವಿಗಳು ವಿಫಲ

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯಲ್ಲಿ ಕೊರೆಸಿದ ಶೇ.30 ರಷ್ಟು ಕೊಳವೆ ಬಾವಿಗಳು ವಿಫಲವಾಗುತ್ತಿವೆ ಇದರಿಂದ ಅಂತರ್ಜಲ ಸಂರಕ್ಷಣೆ ಹಾಗೂ ವೃದ್ಧಿಯ ಬಗ್ಗೆ ಜಾಗೃತರಾಗುವ ಅವಶ್ಯಕತೆ ಇದೆ ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ.ಹೇಳಿದರು.
ಕೇಂದ್ರಿಯ ಅಂತರ್ಜಲ ಮಂಡಳಿಯಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಇತರ ಹಲವು ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಉತ್ತಮವಾಗಿದೆ. ಆದರೂ ನೀರು ಸಿಗಲು 200 ರಿಂದ 300 ಅಡಿ ಕೊರೆಯಬೇಕಾದ ಪರಿಸ್ಥಿತಿ ಕೆಲವೆಡೆ ಇದೆ. ನೀರಿನಲ್ಲಿ ಫ್ಲೋರೈಡ್ ನಂಥ ಅಂಶಗಳು ಕಂಡುಬರುತ್ತಿವೆ. ಇದು ಎಚ್ಚರಿಕೆಯ ಗಂಟೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.
ಜಿಲ್ಲಾ ಪಂಚಾಯಿತಿಯಿಂದ ಜಲಜೀವನ ಮಿಷನ್ ಯೋಜನೆಯಡಿ 300 ಕೋಟಿಗೂ ಅಧಿಕ ವೆಚ್ಚದಲ್ಲಿ ಸುಮಾರು 918 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು 500 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಭೂಗರ್ಭಶಾಸ್ತ್ರಜ್ಞ ಡಾ.ಜಿ.ವಿ.ಹೆಗಡೆ, ಕೇಂದ್ರೀಯ ಅಂತರ್ಜಲ ಮಂಡಳಿಯ ನೈರುತ್ಯ ಕ್ಷೇತ್ರದ ವಿಜ್ಞಾನಿ ದಾಮರಾಲ್, ಬೆಳಗಾವಿಯ ವಿಜ್ಞಾನಿ ಬಿ.ಪಿ.ಸಂಗೀತಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಪ್ರಕಾಶ ವೇದಿಕೆಯಲ್ಲಿದ್ದರು.