ಜಿಲ್ಲೆ

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ:ಎಚ್.ಡಿ.ಕುಮಾರಸ್ವಾಮಿ

Hassan - Mohan Kanthur

ಹಾಸನ: ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಉದ್ದೇಶದಿಂದ ಈಗಾಗಲೇ ಕೈಗಾರಿಕೋದ್ಯಮಿಗಳೊಂದಿಗೆ ಮಾತನಾಡುತ್ತೇನೆ. ಹಾಸನದಲ್ಲಿ ಖಂಡಿತವಾಗಿಯೂ ಕೈಗಾರಿಕೆ ಸ್ಥಾಪನೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಖಂಡಿತವಾಗಿಯೂ ಕೈಗಾರಿಕೆ ಸ್ಥಾಪನೆ ಮಾಡುತ್ತೇವೆ. ರಾಜ್ಯದಲ್ಲಿ ನಷ್ಟದಲ್ಲಿರುವ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿದ್ದೇನೆ. ಹೊಸ ಕೈಗಾರಿಕೆ ಸ್ಥಾಪನೆಗೆ ಉದ್ಯಮಿಗಳು ಹೂಡಿಕೆ ಮಾಡಲು ಮುಂದಾದಾಗ ಇಂತಹ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಹೂಡಿಕೆ ಮಾಡಿ ಎಂದು ಹೇಳಬಹದು. ಅದನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಬೇಕು. ಆದರೆ, ರಾಜ್ಯ ಸರ್ಕಾರ ಸಹಕಾರವನ್ನೇ ನೀಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕುಮಾರಸ್ವಾಮಿ ಅಭಿವೃದ್ಧಿ ಕಾರ್ಯಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್‌ನವರ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಏನು ಕೆಲಸ ಮಾಡುತ್ತಿದೇನೆಂದು ಪ್ರಧಾನ ಮಂತ್ರಿಗೆ ಉತ್ತರಿಸುತ್ತೇನೆ, ಕಾಂಗ್ರೆಸ್ ಮುಖಂಡರಿಗೆ ಹೇಳಬೇಕಿಲ್ಲ. ನಾನು ಏನು ಕೆಲಸ ಮಾಡಿದ್ದೇನೆಂದು ಸಭಾಪತಿಗಳ ಮುಂದೆ ವರದಿ ಒಪ್ಪಿಸುವೆ. ನನಗೆ ಏನು ಕೆಲಸ ಮಾಡಬೇಕೆಂದು ಗೊತ್ತಿದೆ. ರಾಜ್ಯ ಸರ್ಕಾರದ ದ್ವೇಷ ರಾಜಕಾರಣ ಮಾಡುತ್ತಿದೆ. ಇವರಿಂದ ಯಾವ ಕೆಲಸ ಮಾಡಬೇಕೆಂದು ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯದ ಹಲವೆಡೆ ಅತಿವೃಷ್ಟಿಯಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದು, ರೈತರಿಗೆ ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇನ್ನೂ ನೀಡಿಲ್ಲ. ಈ ನಡುವೆ ಮೂರು ಕ್ಷೇತ್ರದ ಉಪಚುನಾವಣೆ ಬಂದಿರುವುದರಿಂದ ಇನ್ನು 15 ದಿನಗಳ ಕಾಲ ಎಲ್ಲರೂ ಅದರಲ್ಲೇ ಮುಳುಗುತ್ತಾರೆ. ಒಂದು ಕ್ಷೇತ್ರಕ್ಕೆ 8 ಸಚಿವರನ್ನು ಚುನಾವಣಾ ಉಸ್ತುವಾರಿಗೆ ಹಾಕಿರುವುದನ್ನು ಎಲ್ಲೂ ನೋಡಿರಲಿಲ್ಲ. ಚುನಾವಣೆ ಗೆಲ್ಲಲು ತೋರುತ್ತಿರುವ ಆಸಕ್ತಿಯನ್ನು ರಾಜ್ಯದ ಜನರ ಮೇಲೆ ತೋರಿಬೇಕು. ರೈತರ ಸಂಕಷ್ಟಗಳನ್ನು ಪರಿಹರಿಸಲು ಅವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದ ಹಲವು ಪ್ರದೇಶಗಳಲ್ಲಿ ಸಾಕಷ್ಟು ಮಳೆ ಹಾನಿ ಸಂಭವಿಸಿ, ರೈತರ ಬದುಕು ಧಾರುಣ ಸ್ಥಿತಿಗೆ ತಲುಪಿದೆ. ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ ರಾಜ್ಯದಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿರುವ ಬಗ್ಗೆ ಹೇಳಿದ್ದಾರೆ. ಪ್ರಕೃತಿ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡಿದೆ. ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಿವೆ. ನಮ್ಮ ಕೆರೆಗಳನ್ನು ತುಂಬಿಸುವುನ್ನು ಬಿಟ್ಟು ತಮಿಳುನಾಡಿಗೆ ಸಾಕಷ್ಟು ನೀರು ಹರಿಸಿದಾರೆ. ಇನ್ನದರೂ ರಾಜ್ಯದ ಜನರ ಬಗ್ಗೆ ಸರ್ಕಾರ ಕಾಳಜಿ ತೋರಲಿ ಎಂದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಕರು ಆನ್‌ಲೈನ್ ಬಿಟ್ಟಿಂಗ್ ಗೇಮ್ ಆಡಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಟ್ಕಾ, ಜೂಜಾಟವೂ ನಡೆಯುತ್ತಿದೆ. ರಾಜ್ಯ ಮಾದಕ ವಸ್ತುಗಳ ತಾಣವಾಗುತ್ತಿದೆ ಎಂಬ ವರದಿಗಳು ಕೂಡ ಬರುತ್ತಿದೆ. ಇದಕ್ಕೆಲ್ಲ ಪ್ರಮುಖ ಕಾರಣ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದು. ರಾಜ್ಯದಲ್ಲಿ ಕಾನೂನು ವೈಫಲ್ಯಗಳು ಜನಸಾಮಾನ್ಯ ಬದುಕಿನ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಟೀಕಿಸಿದರು.

ಜಿಎಸ್‌ಟಿಯಲ್ಲಿ ವಿಚಾರದಲ್ಲಿ ತಾರತಮ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಒಕ್ಕೂಟ ವ್ಯವಸ್ಥೆಯಲ್ಲಿ ಅನುದಾನ ಪಡೆಯಲು ಅದರದೆಯಾದ ಮಾರ್ಗಗಳಿವೆ ಅದನ್ನು ಬಿಟ್ಟು ಪತ್ರಿಕೆಗಳಲ್ಲಿ ಕೆಸರೆರಚಾಟ ನಡೆಸಿದರೆ ಆಗುವುದಿಲ್ಲ. ನಾನು 20 ತಿಂಗಳು ರಾಜ್ಯದಲ್ಲಿ ಆಡಳಿತ ನಡೆಸಿದ್ದೇನೆ, ರೈತರ ಸಾಲ ಮನ್ನಾ ಮಾಡಿದ್ದಕ್ಕೆ ಕೇಂದ್ರ ಬಳಿ ಹೋಗಿ ಹಣ ಕೊಡಿ ಎಂದು ಕೇಳಲಿಲ್ಲ. ರಾಜ್ಯದಲ್ಲಿ ನಾವು ಸಂಗ್ರಹ ಮಾಡಿದ ತೆರಿಗೆ ಹಣದಲ್ಲೇ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಕೊಟ್ಟ ಕುದುರೆ ಏರಲಾಗದವ ವೀರನೂ ಅಲ್ಲ ಶೂರನೂ ಅಲ್ಲ ಎಂಬ ಮಾತು ಕಾಂಗ್ರೆಸ್‌ನವರಿಗೆ ಅನ್ವಯಿಸುತ್ತದೆ ಎಂದು ಹೇಳಿದರು.