ಹಾಸನ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರಿಗೆ ಜಮೀನು ಗುತ್ತಿಗೆ ನೀಡಲು ಅರ್ಜಿ ಸ್ವೀಕರಿಸುತ್ತಿದ್ದರೂ ನಮ್ಮ ಜಿಲ್ಲೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷೃ ತೋರಲಾಗುತ್ತಿದೆ ಎಂದು ವಕೀಲ ಕವನ್‌ಗೌಡ ಅವರು ಆರೋಪಿಸಿದರು.
ಕರ್ನಾಟಕ ಭೂಕಂದಾಯ (3ನೇ ತಿದ್ದುಪಡಿ) ಅಧಿನಿಯಮ 2022ರ ಪ್ರಕಾರ ಕಾಫಿ ಬೆಳೆಗಾರರು 2005ರಿಂದ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಬೆಳೆ ಬೆಳೆಯುತ್ತಿದ್ದರೆ ಅಂತವರಿಗೆ ಭೂಮಿಯನ್ನು ಗುತ್ತಿಗೆ ನೀಡಲು ಸರ್ಕಾರ ಆದೇಶ ರೂಪಿಸಿದೆ. ಈ ಪ್ರಕಾರ ಪಕ್ಕದ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಜಿಲ್ಲೆಯಲ್ಲಿ ಈ ಬಗ್ಗೆ ನಮಗೆ ಇನ್ನೂ ಮಾಹಿತಿ ಬಂದಿಲ್ಲವೆಂದು ಅಸಮರ್ಪಕ ಉತ್ತರ ನೀಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾಫಿಬೆಳೆಗಾರರು ಅನಧಿಕೃತವಾಗಿ ಸ್ವಾಧೀನದಲ್ಲಿರುವ ಭೂಮಿಯನ್ನು ಷರತ್ತುಗಳ ಅನ್ವಯ 25 ಎಕರೆ ವರೆಗೆ ನಿಯಮಾನುಸಾರ 30 ವರ್ಷಗಳ ಕಾಲ ಗುತ್ತಿಗೆ ನೀಡಲು ಅಕಾಶವಿದೆ. ಕರ್ನಾಟಕ ಲ್ಯಾಂಡ್ ಗ್ರಾೃಂಡ್ ರೂಲ್ಸ್ 1969ರ ನಿಯಮ 19 ಬಿ ಅಡಿಯಲ್ಲಿ ಗುತ್ತಿಗೆಗೆ ಸಂಬಂಧಪಟ್ಟಂತೆ (19ಬಿ ಉಪನಿಯಮ 2) ಅಡಿಯಲ್ಲಿ ಗುತ್ತಿಗೆ ನೀಡಲು ಜಿಲ್ಲಾಧಿಕಾರಿ ಅರ್ಜಿ ಸ್ವೀಕರಿಸಬೇಕು ಆದರೆ ಇಲ್ಲಿಯ ವರೆಗೆ ಹಾಸನ ಜಿಲ್ಲಾಧಿಕಾರಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಕೂ ಕಾಫಿಬೆಳೆಗಾರರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ಪ್ರಶ್ನಿಸಿದರೆ ಆನ್‌ಲೈನ್ ಪೋರ್ಟ್‌ಲ್ ಇನ್ನೂ ಸೃಷ್ಟಿಯಾಗಿಲ್ಲ, ತಾಂತ್ರಿಕ ತೊಂದರೆಗಳಿವೆ ಎಂದು ಹೇಳುತ್ತಾರೆ. ಆದರೆ ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಹಾಗಾದೆ ಆ ಜಿಲ್ಲೆಗೆ ಒಂದು ಕಾನೂನು ಈ ಜಿಲ್ಲೆಗೆ ಒಂದು ಕಾನೂನಾ ಎಂದು ಪ್ರಶ್ನಿಸಿದರು.