ಜಿಲ್ಲೆ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮುಂಜಾಗ್ರತೆ ವಹಿಸಿ;:ಮನವಿ

ಹಾಸನ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದ್ದು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮ ಸೇನೆಯಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೊಹಮ್ಮದ್ ಸುಜೀತಾ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಶ್ರೀ ರಾಮಸೇನೆ ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿ ಸುಂದರೇಶ್ ಮತ್ತು ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ ಅವರು ಮಾತನಾಡಿ, ದೇಶಾದ್ಯಂತ ವಕ್ಫ್ ಮಂಡಳಿ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲ ಮುಸ್ಲಿಂ ಧರ್ಮ ಗುರುಗಳು ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲೂ ಅಹಿತಕರ ಘಟನೆಗಳು ನಡೆಯುವ ಮುನ್ನ ಎಚ್ಚರಗೊಳ್ಳಬೇಕು ಎಂದು ಹೇಳಿದರು.

ಸಿಎಎ ಮತ್ತು ಎನ್‌ಆರ್‌ಸಿ ಕೃಷಿ ಮಸೂದೆ ಮಂಡನೆಯಾದಾಗ ನಡೆದ ಗಲಭೆಗಳಿಗೆ ಪ್ರಚೋದನಕಾರಿ ಹೇಳಿಕೆಗಳೇ ಕಾರಣ. ಈಗಲೂ ಅದೇ ವಾತಾವರಣ ಸೃಷ್ಟಿಸುವ ಸಂಶಯವಿದ್ದು, ಜಿಲ್ಲೆಯಾದ್ಯಂತ ಕಾನೂನು ಬಿಗಿಗೊಳಿಸಬೇಕು. ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಮೂಲಕ ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂದು ಮನವಿ ಮಾಡಿದರು.

ದೇವಸ್ಥಾನ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸೇರಿ ಜನದಟ್ಟಣೆ ಪ್ರದೇಶಗಳಲ್ಲಿ ನಿಗಾ ವಹಿಸಬೇಕು. ಸಾರ್ವಜನಿಕರಿಗೆ ಸೂಕ್ತ ಭದ್ರತೆ ನೀಡುವುದರ ಜೊತೆಗೆ ಆಸ್ತಿಪಾಸ್ತಿ ರಕ್ಷಿಸಬೇಕೆಂದು ಕೋರಿದರು.

ಶ್ರೀರಾಮ ಸೇನೆ ಜಿಲ್ಲಾ ಗೌರವಾಧ್ಯಕ್ಷ ಕುಮಾರ್, ಕಾರ್ಯಾಧ್ಯಕ್ಷ ಮಹೇಶ್ ಕುಮಾರ್, ತಾಲ್ಲೂಕು ಅಧ್ಯಕ್ಷ ಉಮೇಶ್ ಸಕಲೇಶಪುರ, ಪುನೀತ್, ಮನು, ವರುಣ್, ಅರುಣ್ ಇತರರಿದ್ದರು.