ಜಿಲ್ಲೆ

ಜಿಲ್ಲೆಯಲ್ಲಿ ಕರೊನಾ ಟೆಸ್ಟಿಂಗ್ ಲ್ಯಾಬ್

ಗದಗ: ಗದಗ ಜಿಲ್ಲೆಯಲ್ಲಿ ಶೀಘ್ರವೇ ಕರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್ ತೆರೆಯಲು ಕ್ರಮ ಜರುಗಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಕೋವಿಡ್-19 ನಿಯಂತ್ರಣ ಕುರಿತು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂಜಾಗ್ರತೆ ಕ್ರಮ ಕೈಗೊಂಡಿವೆ. ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರಿಗೆ ಸ್ಪೂರ್ತಿ ತುಂಬುವ ಕಾರ್ಯ ಮಾಡಲಾಗುತ್ತಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕರೊನಾ ನಿಯಂತ್ರಣದ ಸ್ಥಿತಿಗತಿಯನ್ನು ಪರಿಶೀಲಿಸಲಾಗಿದೆ. ಅಲ್ಲಿನ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ವೈದ್ಯರು, ಸಂಸದರಿಂದ ಮಾಹಿತಿ ಸಂಗ್ರಹಿಸಿ ಕೋವಿಡ್-19 ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿ 277 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ರಾಜ್ಯದಲ್ಲಿ ಒಟ್ಟು ಕರೊನಾದಿಂದ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ. 75 ಜನ ಗುಣಮುಖರಾಗುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ 451 ಜನರು ನಿಗಾಕ್ಕೆ ಒಳಗಾಗಿದ್ದಾರೆ. 132 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 303 ಜನರು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿದ್ದಾರೆ. 202 ಮಾದರಿಗಳು ನಕಾರಾತ್ಮಕವಾಗಿವೆ. ಜಿಲ್ಲೆಯಲ್ಲಿ 82 ವರ್ಷದ ವೃದ್ಧೆ ಪಿ 166 ಮರಣ ಹೊಂದಿದ್ದಾರೆ. ಅವರ ಜತೆ ಸಂಪರ್ಕದಲ್ಲಿದ್ದ 82 ಜನರನ್ನು ಗುರುತಿಸಿ ನಿಗಾಕ್ಕೆ ಒಳಪಡಿಸಿ ತಪಾಸಣೆಯನ್ನೂ ಮಾಡಲಾಗಿದೆ. ಪರೀಕ್ಷೆಗೆ ಕಳುಹಿಸಿದ ಅವರೆಲ್ಲರ ವೈದ್ಯಕೀಯ ವರದಿ ನಕಾರಾತ್ಮಕಾಗಿವೆ. ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ ಹಾಗೂ ನರ್ಸಿಂಗ್ ಹೋಮ್ಳ ವೈದ್ಯರು ಕ್ಲಿನಿಕ್ ಬಂದ್ ಮಾಡದೇ ವೈದ್ಯಕೀಯ ಸೇವೆ ನೀಡಿ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ಶ್ರೀರಾಮುಲು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19 ಚಿಕಿತ್ಸೆಯಲ್ಲಿದ್ದ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದು, ಪಿ 166 ಪ್ರಕರಣದ ಪ್ರಾಥಮಿಕ ಸಂಪರ್ಕದಲ್ಲಿದ್ದಂತಹ 82 ಜನರನ್ನು ಗುರುತಿಸಿ ಪ್ರತ್ಯೇಕ ನಿಗಾದಲ್ಲಿಡಲಾಗಿದೆ. ಅಲ್ಲದೇ, ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲವೂ ನಕಾರಾತ್ಮಕವಾಗಿವೆ. ಕೋವಿಡ್-19 ಪತ್ತೆಯಾದ ರಂಗನವಾಡಿ ಗಲ್ಲಿ, ಎಸ್.ಎಂ. ಕೃಷ್ಣ ಪ್ರದೇಶಗಳನ್ನು ಕಂಟೇನ್​ವೆುಂಟ್ ಏರಿಯಾ ಎಂದು ಘೊಷಿಸಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಪಿಂಚಣಿ ಯೋಜನೆಗಳ ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ಬ್ಯಾಂಕ್ ಮಿತ್ರರ ಮೂಲಕ ಸೇವೆ ಒದಗಿಸಲು ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಶೇ. 82ರಷ್ಟು ಕುಟುಂಬಗಳಿಗೆ ಪಡಿತರ ವಿತರಿಸಲಾಗಿದೆ ಎಂದು ತಿಳಿಸಿದರು.

ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉಪಸ್ಥಿತರಿದ್ದರು.