ಬೆಂಗಳೂರು ಗ್ರಾಮಾಂತರ: ಕಳೆದೆರಡು ವರ್ಷದಿಂದ ಕಾಡುತ್ತಿದ್ದ ಹೆಮ್ಮಾರಿ ಕರೊನಾ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದೆ, 15 ದಿನಗಳಿಂದ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು, ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ. ಪ್ರಸ್ತುತ 149 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ದಿನಗಳಿಂದೀಚೆಗೆ ಕರೊನಾಗೆ 4 ಮಂದಿ ಬಲಿಯಾಗಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ 61,480 ಕರೊನಾ ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 2030 ಬೇರೆ ಜಿಲ್ಲೆ ಹಾಗೂ ಅನ್ಯರಾಜ್ಯದವರದ್ದಾಗಿದೆ, ಉಳಿದ 59,441 ಮಂದಿ ಗ್ರಾಮಾಂತರ ಜಿಲ್ಲೆ ನಿವಾಸಿಗಳದ್ದಾಗಿದ್ದು, ಒಟ್ಟು ಪ್ರಕರಣಗಳಲ್ಲಿ 30,466 ಸೋಂಕಿತರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.
ಹಬ್ಬದ ಬಳಿಕವೂ ನಿಯಂತ್ರಣ: ನೆರೆಯ ಕೇರಳದಲ್ಲಿ ಹಬ್ಬಗಳ ಆಚರಣೆಗೆ ಅನುಮತಿ ನೀಡಿದ್ದರಿಂದ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದ ಬಗ್ಗೆ ಆತಂಕ ಹೆಚ್ಚಾಗಿತ್ತು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಗೌರಿಗಣೇಶ ಹಬ್ಬಕ್ಕೆ ಕೆಲವೊಂದು ಮಾರ್ಗಸೂಚಿಗಳ ಅನ್ವಯ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿತ್ತು. ಆದರೂ ಕರೊನಾ ಸೋಂಕು ತೀವ್ರಗೊಳ್ಳುವ ಆತಂಕ ಮನೆಮಾಡಿತ್ತು. ಅದೃಷ್ಟವಶಾತ್ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗಿಲ್ಲ.
ಕರೊನಾ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಜಿಲ್ಲಾಡಳಿತ ಇದುವರೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ 5,73,089 ಲಸಿಕೆ ನೀಡಿದೆ. 8,33,641 ಲಸಿಕೆ ನೀಡುವ ಗುರಿ ಇಟ್ಟುಕೊಂಡಿದ್ದ ಜಿಲ್ಲಾಡಳಿತ ಉಳಿದ 2,58,040 ಲಸಿಕೆ ನೀಡುವ ಗುರಿಸಾಧನೆಗೆ ಮುಂದಾಗಿದೆ. ರಾಜ್ಯಾದ್ಯಂತ ಸೆ.17ರಂದು ಕೋವಿಡ್ ಲಸಿಕಾ ಮೇಳದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಲಸಿಕಾ ಮೇಳಕ್ಕೆ ಪೂರ್ವ ಸಿದ್ದತೆ ನಡೆದಿದೆ.
ದೊಡ್ಡಬಳ್ಳಾಪುರಕ್ಕೆ ಹೆಚ್ಚು: ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ದೊಡ್ಡಬಳ್ಳಾಪುರ ತಾಲೂಕಿಗೆ 30 ಸಾವಿರ ಲಸಿಕೆ ನೀಡುವ ಗುರಿಯೊಂದಿಗೆ ಪೂರ್ವಸಿದ್ಧತೆ ನಡೆಸಲಾಗಿದೆ. ನೆಲಮಂಗಲ ತಾಲೂಕಿಗೆ 22 ಸಾವಿರ ದೇವನಹಳ್ಳಿ ಹಾಗೂ ಹೊಸಕೋಟೆ ತಾಲೂಕಿಗೆ ತಲಾ 10 ಸಾವಿರದಂತೆ ಒಟ್ಟು 72 ಸಾವಿರ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ಸಾರ್ವಜನಿಕರು ಲಸಿಕೆ ಪಡೆಯಲು ಸಹಕಾರಿಯಾಗುವಂತೆ ಗ್ರಾಮಮಟ್ಟಗಳಲ್ಲಿ ಹಾಗೂ ಪಟ್ಟಣಗಳ ವ್ಯಾಪ್ತಿಯ ವಾರ್ಡ್‌ಗಳಲ್ಲೇ ಲಸಿಕಾಕರಣದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕರೊನಾ ಸೋಂಕು ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದೆ, ಗ್ರಾಮಮಟ್ಟದಿಂದ ಪಟ್ಟಣ, ನಗರಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕುಗೊಳಿಸಲಾಗಿದೆ, ಸೆ.17ರಂದು 72 ಸಾವಿರ ಲಸಿಕೆ ನೀಡುವ ಗುರಿಯೊಂದಿಗೆ ಜಿಲ್ಲೆಯಲ್ಲಿ ಪೂರ್ವ ಸಿದ್ಧತೆ ನಡೆಸಲಾಗಿದೆ. ಸಾರ್ವಜನಿಕರು ತಪ್ಪದೆ ಲಸಿಕೆ ಪಡೆದು ಕರೊನಾದಿಂದ ರಕ್ಷಣೆ ಪಡೆಯಬೇಕು. ಕೆ.ಶ್ರೀನಿವಾಸ್ ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ