ಗದಗ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕರೊನಾ ವೈರಸ್ಗೆ ತುತ್ತಾಗಿ ಸಾವನ್ನಪ್ಪುವವರ ಸಂಖ್ಯೆ ಏರತೊಡಗಿದೆ. ಶುಕ್ರವಾರ ಜ್ವರದಿಂದ ಬಳಲುತ್ತಿದ್ದ ನಗರದ ಶಹಾಪುರಪೇಟೆಯ ನಿವಾಸಿ, 51 ವರ್ಷದ ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಮಹಿಳೆಯನ್ನು ಜು. 7ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಿಕೊಡಲಾಗಿತ್ತು. ಜು. 9ರಂದು ಅವರಿಗೆ ಕರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಕೂಡಲೇ ಅವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ. ಈ ಮಹಿಳೆ ವಾರದ ಹಿಂದೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆನಂತರವೇ ಅವರಿಗೆ ಜ್ವರ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕರೊನಾ ಸೋಂಕಿನಿಂದ ಒಟ್ಟು ಆರು ಜನರು ಮೃತಪಟ್ಟಂತಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರ 19 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಗದಗ-ಬೆಟಗೇರಿ ನಗರದ ಬಸವೇಶ್ವರ ನಗರ ನಿವಾಸಿ 51 ವರ್ಷದ ಮಹಿಳೆಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಬೆಟಗೇರಿಯ ಕುರಟ್ಟಿಪೇಟ ನಿವಾಸಿ 33 ವರ್ಷದ ಪುರುಷನ ಸಂಪರ್ಕದಿಂದಾಗಿ ಅದೇ ಪ್ರದೇಶದ 25 ವರ್ಷದ ಮಹಿಳೆ, 8 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಬೆಟಗೇರಿಯ ಹೆಲ್ತ್ ಕ್ಯಾಂಪ್ ನಿವಾಸಿ 75 ವರ್ಷದ ಸೋಂಕಿತ ಪುರುಷನ (ಪಿ-25321) ಸಂಪರ್ಕದಿಂದ ಗದಗ ತಾಲೂಕಿನ ಕಣಗಿನಹಾಳ ಗ್ರಾಮದ 26 ವರ್ಷದ ಪುರುಷ, ಮುಂಡರಗಿ ತಾಲೂಕಿನ ಡೋಣಿ ಗ್ರಾಮದ 24 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದ ಪುಣೆಯಿಂದ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿ 52 ವರ್ಷದ ಪುರುಷ, ನಗರದ ಮುಳಗುಂದ ನಾಕಾ ಪ್ರದೇಶದ ನಿವಾಸಿ 25 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಗದಗ-ಬೆಟಗೇರಿ ನಗರದ ಭೀಷ್ಮ ಕೆರೆ ನಿವಾಸಿ 36 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ದೆಹಲಿಯಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ವಾಣಿಪೇಟ ನಿವಾಸಿ 28 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಗದಗ-ಬೆಟಗೇರಿ ನಗರದ ವೀರನಾರಾಯಣ ಬಡಾವಣೆ ನಿವಾಸಿ 33 ವರ್ಷದ ಸೋಂಕಿತ ಪುರುಷನ (ಪಿ-16612) ಸಂಪರ್ಕದಿಂದ ಗದಗ ಎಪಿಎಂಸಿ ಪ್ರದೇಶದ ನಿವಾಸಿ 62 ವರ್ಷದ ಪುರುಷ, 56 ವರ್ಷದ ಮಹಿಳೆ, 10 ವರ್ಷದ ಬಾಲಕಿ, 24 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಧಾರವಾಡ ಜಿಲ್ಲೆಗೆ ಹೋಗಿ ಬಂದಿದ್ದ ಶಿರಹಟ್ಟಿ ಪಟ್ಟಣದ ನಿವಾಸಿ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಶಿರಹಟ್ಟಿ ತಾಲೂಕಿನ ಮ್ಯಾಗೇರಿ ಓಣಿ ನಿವಾಸಿ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಮೂಲದ ಪತ್ತೆ ಕಾರ್ಯ ನಡೆದಿದೆ. ಗದಗ-ಬೆಟಗೇರಿ ನಗರದ ಗಂಗಿಮಡಿ ಪ್ರದೇಶದ ನಿವಾಸಿ 17 ವರ್ಷದ ಪುರುಷನಿಗೆ ಕೆಮ್ಮು ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಮುಂಡರಗಿ ತಾಲೂಕಿನ ಜಂತ್ಲಿ ಶಿರೂರ ಗ್ರಾಮದ ನಿವಾಸಿ 38 ವರ್ಷದ ಮಹಿಳೆಗೆ ಕೆಮ್ಮು ಜ್ವರದ ಲಕ್ಷಣಗಳಿಂದಾಗಿ ಸೋಂಕು ಪತ್ತೆಯಾಗಿದೆ. ಅಂತರ ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಬೆಟಗೇರಿಯ ಹೆಲ್ತ್ ಕ್ಯಾಂಪ್ ನಿವಾಸಿ 62 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಎಲ್ಲ ಸೋಂಕಿತರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.