ಜಿಲ್ಲೆ

ಜಿಲ್ಲೆಯಲ್ಲಿ ಆರಂಭವಾಗದ ಅಭಿಯಾನ, ಕಾಲುಬಾಯಿ ರೋಗದ ಆತಂಕ, ಪಶುಪಾಲನಾ ಇಲಾಖೆ ಕೆಎಂಎ್ ಸಹಯೋಗದಲ್ಲಿ ವ್ಯಾಕ್ಸಿನ್

ಬೆಂಗಳೂರು ಗ್ರಾಮಾಂತರ: ಗೊರಸು ಪ್ರಾಣಿಗಳಿಗೆ ಕಾಡುವ ಮಾರಣಾಂತಿಕ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಕೇಂದ್ರ ಸರ್ಕಾರ ಇನ್ನೂ ಚಾಲನೆ ನೀಡದ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯ ಹೈನುಗಾರರನ್ನು ಆತಂಕಕ್ಕೀಡು ಮಾಡಿದೆ. ಪ್ರಸ್ತುತ ಕಾಲುಬಾಯಿ ರೋಗ ಕಾಣಿಸಿಕೊಳ್ಳುತ್ತಿರುವ ಹಳ್ಳಿಗಳಲ್ಲಿ ಜಿಲ್ಲಾ ಪಶುಪಾಲನಾ ಇಲಾಖೆ ಹಾಗೂ ಕೆಎಂಎ್ ಸಹಯೋಗದಲ್ಲಿ ವ್ಯಾಕ್ಸಿನ್ ಹಾಕುವ ಕಾರ್ಯಕ್ರಮ ಮುಂದುವರಿದಿದ್ದು, ಹೈನುಗಾರರು ಲಸಿಕಾ ಅಭಿಯಾನ ಆರಂಭ ಎದುರುನೋಡುತ್ತಿದ್ದಾರೆ.

2020ರ ಅಕ್ಟೋಬರ್ ವೇಳೆಯಲ್ಲಿ ಜಿಲ್ಲಾದ್ಯಂತ ಕಾಲುಬಾಯಿ ಲಸಿಕಾ ಅಭಿಯಾನ ನಡೆಸಲಾಗಿತ್ತು, ಸುಮಾರು 1.60 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. ಈ ಬಾರಿ ಸೆಪ್ಟೆಂಬರ್ ಮುಗಿಯುತ್ತಿದ್ದರೂ ಅಭಿಯಾನದ ಬಗ್ಗೆ ಇನ್ನೂ ಆದೇಶ ಬಂದಿಲ್ಲ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರದಿಂದ ಲಸಿಕೆ ಸ್ಥಗಿತ: ರಾಸುಗಳಿಗೆ ಆರೋಗ್ಯ ರಕ್ಷಣಾ ಲಸಿಕೆ ಪೂರೈಕೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಜಾನುವಾರುಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ತಿಂಗಳಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಕಾಲುಬಾಯಿ ರೋಗ ತೀವ್ರಗೊಂಡಿದ್ದು, ಪಶುಪಾಲನಾ ಇಲಾಖೆ ಅಂಥ ಜಾನುವಾರುಗಳಿಗೆ ಲಭ್ಯವಿದ್ದ ಲಸಿಕೆ ನೀಡಿ ವೈದ್ಯೋಪಚಾರ ನಡೆಸುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಲಸಿಕೆ ಕೊರತೆ ಇಲ್ಲವಾದರೂ ಮುಂದಿನ ದಿನಗಳಲ್ಲಿ ರೋಗ ಹರಡುವಿಕೆ ಹೆಚ್ಚಾದರೆ ಲಸಿಕೆ ಕೊರತೆ ಎದುರಾಗಬಹುದು ಎಂಬ ಆತಂಕ ಎದುರಾಗಿದೆ.

ಕಾಲುಬಾಯಿ ಲಕ್ಷಣಗಳೇನು?: ಪಿಕೋರ್ನಾ ವೈರಸ್‌ನಿಂದ ಕಾಲುಬಾಯಿ ಸೋಂಕು ತಗಲುತ್ತದೆ, ಇದೊಂದು ಸಾಂಕ್ರಾಮಿಕ ಮಾರಣಾಂತಿಕ ಕಾಯಿಲೆಯಾಗಿದೆ, ಸೋಂಕು ತಗುಲಿದ ರಾಸುಗಳ ಗೊರಸು ಹಾಗೂ ಬಾಯಿಯ ಭಾಗದಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಸಣ್ಣ ನೀರುಗುಳ್ಳೆಗಳಂತೆ ಕಾಣಿಸಿಕೊಂಡು ಬಳಿಕ ಅವು ಒಡೆದು ಜೊಲ್ಲು ಸೋರಲು ಆರಂಭವಾಗುತ್ತದೆ, ಗೊರಸು ಭಾಗದಲ್ಲಿ ಹುಣ್ಣು ತೀವ್ರಗೊಂಡು ರಾಸುಗಳು ನಡೆಯಲಾರದೆ ಪರಿತಪಿಸುತ್ತವೆ, ಸೂಕ್ತ ಚಿಕಿತ್ಸೆ ದೊರಕದಿದ್ದರೆ ರಾಸುಗಳು ಸಾವನ್ನಪ್ಪುವ ಸಂಭವ ಹೆಚ್ಚು.

ಖಾಸಗಿಯಾಗಿ ಖರೀದಿ: ಕೆಲವು ಗ್ರಾಮಗಳಲ್ಲಿ ಈಗಾಗಲೇ ಖಾಸಗಿಯಾಗಿ ಹಣ ತೆತ್ತು ಜಾನುವಾರುಗಳಿಗೆ ಲಸಿಕೆ ಹಾಕಿಸುತ್ತಿದ್ದಾರೆ, ಇನ್ನು ಕೆಲವು ಕಡೆಗಳಲ್ಲಿ ನಾಟಿ ಔಷಧದ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ, ಹೈನುಗಾರಿಕೆಯನ್ನೇ ಜೀವನಾಧಾರ ಮಾಡಿಕೊಂಡಿರುವ ಕುಟುಂಬಗಳು ದಿಕ್ಕುತೋಚದಂತಾಗಿವೆ. ಈ ಮೊದಲಿಗೆ ವರ್ಷಕ್ಕೆ ಎರಡು ಬಾರಿ ಲಸಿಕೆ ಅಭಿಯಾನ ನಡೆಯುತ್ತಿತ್ತು, ಕಳೆದ ವರ್ಷ ಒಂದು ಬಾರಿ ಲಸಿಕೆ ಅಭಿಯಾನ ನಡೆಯಿತಾದರೂ ಎರಡನೇ ಬಾರಿಯಷ್ಟರಲ್ಲೇ ಸ್ಥಗಿತಗೊಂಡಿತು. ಈ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಾದರೂ ಲಸಿಕಾ ಅಭಿಯಾನ ಆರಂಭವಾಗುವುದೇ ಎಂದು ಹೈನುಗಾರರರು ಎದುರು ನೋಡುತ್ತಿದ್ದಾರೆ.

ಲಸಿಕೆಗೆ ಕರೊನಾ ಅಡ್ಡಗಾಲು: ಕರೊನಾ ಮೊದಲ ಅಲೆ ವೇಳೆ ಕಾಲುಬಾಯಿ ಲಸಿಕೆ ಹಾಕುವ ಸಂಬಂಧ ವೈದ್ಯ ಸಿಬ್ಬಂದಿ ಹಾಗೂ ಸರ್ಕಾರದ ನಡುವೆ ಹಗ್ಗಾಜಗ್ಗಾಟಕ್ಕೆ ನಡೆದಿತ್ತು. ಸರ್ಕಾರ ಹಾಗೂ ಸಿಬ್ಬಂದಿಯ ನಡುವೆ ಮಾತುಕತೆ ಲಪ್ರದವಾಗಿ ಕೆಲವೊಂದು ರಕ್ಷಣಾ ಕ್ರಮಗಳೊಂದಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆತಿತ್ತು.

ಕಾಲುಬಾಯಿ ರೋಗ ಕಾಣಿಸಿಕೊಳ್ಳುತ್ತಿರುವ ಗ್ರಾಮಗಳಲ್ಲಿ ಪಶುಪಾಲನಾ ಇಲಾಖೆ ಹಾಗೂ ಕೆಎಂಎ್ ಸಹಯೋಗದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರಿಸಲಾಗಿದೆ, ಲಸಿಕಾ ಅಭಿಯಾನ ಆರಂಭಕ್ಕೆ ಕೇಂದ್ರದ ಆದೇಶದ ನಿರೀಕ್ಷೆಯಲ್ಲಿದ್ದೇವೆ, ಪ್ರಸ್ತುತ ಜಿಲ್ಲೆಯಲ್ಲಿ ಸೋಂಕು ತೀವ್ರಗೊಂಡಿಲ್ಲ, ಅಗತ್ಯ ಲಸಿಕೆ ದಾಸ್ತಾನಿದೆ. ಡಾ.ಅನಿಲ್‌ಕುಮಾರ್, ಪಶುವೈದ್ಯಾಧಿಕಾರಿ ಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರ