ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಮಳೆ ಮುಂದುವರಿದಿದ್ದರೆ, ಮತ್ತೆ ಕೆಲವೆಡೆ ಸಂಪೂರ್ಣ ಇಳಿಮುಖವಾಗಿದೆ. ಮಳೆಯಿಂದಾಗಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿವೆ.
ಅಕ್ಕಪಕ್ಕದ ಜಿಲ್ಲೆಗಳಲ್ಲಿ ಇನ್ನೂ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ನಾಲ್ಕು ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಆದರೆ, ಪ್ರವಾಹ ಭೀತಿ ಉಂಟಾಗಿಲ್ಲ.
ಮಳೆ ವಿವರ: ಶುಕ್ರವಾರ ಬೆಳಗ್ಗಿನವರೆಗಿನ 24 ತಾಸುಗಳ ಅವಧಿಯಲ್ಲಿ ಹಾವೇರಿಯಲ್ಲಿ 9 ಮಿಮೀ, ರಾಣೆಬೆನ್ನೂರ 12, ಬ್ಯಾಡಗಿ 15.4, ಹಿರೇಕೆರೂರು 19, ಸವಣೂರ 14.5, ಶಿಗ್ಗಾಂವಿ 16.2 ಹಾಗೂ ಹಾನಗಲ್ಲ ತಾಲೂಕಿನಲ್ಲಿ 13.5 ಮಿಮೀ ಮಳೆಯಾಗಿದೆ. ಒಟ್ಟಾರೆ 95.1 ಮಿಮೀ ಮಳೆ ಸುರಿದಿದೆ.
ಎರಡು ದಿನ ಸುರಿದ ಮಳೆಯಿಂದ ಹಾಗೂ ಏಪ್ರಿಲ್ 1ರಿಂದ ಈವರೆಗೆ ಒಟ್ಟು ಹಾವೇರಿ ತಾಲೂಕಿನಲ್ಲಿ 21, ರಾಣೆಬೆನ್ನೂರ 44, ಬ್ಯಾಡಗಿ 27, ಹಿರೇಕೆರೂರ 10, ಸವಣೂರಿನಲ್ಲಿ 45, ಶಿಗ್ಗಾಂವಿ 196, ಹಾನಗಲ್ಲ 22 ಸೇರಿ ಒಟ್ಟು 365 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬ್ಯಾಡಗಿಯಲ್ಲಿ ಒಂದು ಮನೆ ಪೂರ್ಣ ಕುಸಿತವಾಗಿದೆ. ಇದರ ಒಟ್ಟು ಅಂದಾಜು ಹಾನಿ 72.43 ಲಕ್ಷ ರೂ.ಗಳಷ್ಟಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 13.27 ಕಿಮೀ ನಷ್ಟು ರಸ್ತೆ ಹಾನಿಯಾಗಿದೆ. ಇದರ ಅಂದಾಜು ಮೌಲ್ಯ 16.50 ಕೋಟಿ ರೂ.ಗಳಷ್ಟಾಗಿದೆ.
ಬೆಳೆ ಹಾನಿ: ಏಪ್ರಿಲ್ 1ರಿಂದ ಈವರೆಗೆ ರಾಣೆಬೆನ್ನೂರ ತಾಲೂಕಿನಲ್ಲಿ 674.52 ಹೆಕ್ಟೇರ್, ಹಿರೇಕೆರೂರ 76, ಹಾನಗಲ್ಲ 28.77, ಬ್ಯಾಡಗಿ ತಾಲೂಕಿನಲ್ಲಿ 7 ಹೆಕ್ಟೇರ್ ಸೇರಿ ಒಟ್ಟು 785.29 ಹೆಕ್ಟೇರ್ನಷ್ಟು ಬೆಳೆ ನಷ್ಟವಾಗಿದೆ. ಇದರ ಅಂದಾಜು ಹಾನಿಯ ಮೌಲ್ಯ 1.13 ಕೋಟಿ ರೂ.ಗಳಷ್ಟಾಗಿದೆ.
ಮಳೆ ಹಾನಿ ನಿರ್ವಹಣೆಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರ 10 ಜಿಲ್ಲೆಗಳಿಗೆ ತಲಾ 5 ಕೋಟಿ ರೂ.ಗಳಂತೆ ಅನುದಾನವನ್ನು ಆ. 6ರಂದು ಬಿಡುಗಡೆಗೊಳಿಸಿದೆ. ಅದರಲ್ಲಿ ಹಾವೇರಿ ಜಿಲ್ಲೆಗೂ 5 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.