ಜಿಲ್ಲೆ

ಜಿಲ್ಲೆಯಲ್ಲಿ 900 ಜನರಿಂದ ಮತದಾನ

ಮೈಸೂರು: ಮನೆಯಲ್ಲಿಯೇ ಮತದಾನ ಮಾಡಲು ನೀಡಿರುವ ಪ್ರಕ್ರಿಯೆಯಲ್ಲಿ ಎರಡನೇ ದಿನವಾದ ಭಾನುವಾರವೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ 900 ಜನ ಮತದಾನದಲ್ಲಿ ಭಾಗವಹಿಸಿದ್ದರು.
80 ವರ್ಷ ಮೇಲ್ಪಟ್ಟ 773 ಜನ ಹಾಗೂ ಅಂಗವಿಕಲರಾದ 127 ಜನ ಮನೆಯಲ್ಲಿಯೇ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಿದರು. ಚುನಾವಣೆ ಸಿಬ್ಬಂದಿ ಮೊದಲೇ ನೋಂದಾಯಿಸಿಕೊಂಡಿದ್ದವರ ಮನೆಗೆ ತೆರಳಿ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಮತಪತ್ರಗಳನ್ನು ನೀಡಿದರು. ಮತದಾನದ ಬಳಿಕ ಮತಪತ್ರಗಳನ್ನು ಮುದ್ರೆ ಹಾಕಿದ ಮತಪೆಟ್ಟಿಗೆಯಲ್ಲಿ ಹಾಕಿಸಿಕೊಂಡು ಪೊಲೀಸ್ ಭದ್ರತೆಯಲ್ಲಿ ತೆಗೆದುಕೊಂಡು ಹೋದರು.
ಚಾಮರಾಜ ಕ್ಷೇತ್ರದಲ್ಲಿ 102, ಚಾಮುಂಡೇಶ್ವರಿಯಲ್ಲಿ 91, ಎಚ್.ಡಿ.ಕೋಟೆಯಲ್ಲಿ 35, ಹುಣಸೂರಿನಲ್ಲಿ 139, ಕೃಷ್ಣರಾಜದಲ್ಲಿ 135, ನಂಜನಗೂಡಿನಲ್ಲಿ 17, ನರಸಿಂಹರಾಜದಲ್ಲಿ 118, ಪಿರಿಯಾಪಟ್ಟಣದಲ್ಲಿ 117, ತಿ.ನರಸೀಪುರದಲ್ಲಿ 39, ವರುಣದಲ್ಲಿ 107 ಜನ ಮತದಾನ ಮಾಡಿದರು.
ಪ್ರಥಮ ದಿನವಾದ ಶನಿವಾರ 954 ಜನ ಹಕ್ಕು ಚಲಾಯಿಸಿದ್ದು, 80 ವರ್ಷ ಮೇಲ್ಪಟ್ಟ 787 ಜನ, 167 ಅಂಗವಿಕಲರು ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಿದ್ದರು.
80 ವರ್ಷ ಮೇಲ್ಪಟ್ಟ ಆಸಕ್ತರು, ಓಡಾಡಲು ಸಾಧ್ಯವಿಲ್ಲದ ಅಂಗವಿಕಲರು ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲು ಕೇಂದ್ರ ಚುನಾವಣಾ ಆಯೋಗ ಇದೇ ಪ್ರಥಮ ಬಾರಿಗೆ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 80 ವರ್ಷಕ್ಕಿಂತ ಹೆಚ್ಚು ವಯಸ್ಸಾದ 2,404 ಮತದಾರರು, 402 ಅಂಗವಿಕಲರು ಮನೆಯಲ್ಲಿಯೇ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಕೆಲವರು ಮತದಾನ ಮಾಡಲು ನೋಂದಣಿ ಮಾಡಿಸಿಕೊಂಡಿದ್ದರೂ ಮತದಾನಕ್ಕೂ ಮುನ್ನವೇ ಮೃತಪಟ್ಟಿದ್ದಾರೆ. ಈ ಮೂಲಕ ಮನೆಯಲ್ಲಿಯೇ ಮತದಾನ ಮಾಡುವ ಅವರ ಆಸೆ ಈಡೇರಿಲ್ಲ.