ಜಿಲ್ಲೆ

ಜಿಲ್ಲೆಯಲ್ಲಿ 7-8 ಲಕ್ಷ ಸದಸ್ಯತ್ವ ನೋಂದಣಿ ಗುರಿ: ಮಾಜಿ ಶಾಸಕ ಪ್ರೀತಂ ಗೌಡ

ಹಾಸನ: ದೇಶದಲ್ಲಿ ಸೆ.2ರಂದು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸದಸ್ಯರನ್ನಾಗಿ ಮಾಡುವ ಮೂಲಕ ಚಾಲನೆ ನೀಡಲಾಗಿದೆ. ಇಂದು ಹಾಸನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ 7-8 ಲಕ್ಷ ಜನರನ್ನು ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಹೇಳಿದರು.
ನಗರದ ಆರ್‌ಸಿ ರಸ್ತೆಯಲ್ಲಿ ಬಿಜೆಪಿಯ ನೂತನ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷ ಇನ್ನೂ ಗಟ್ಟಿಯಾಗಬೇಕು ಎಂಬುದು ನಮ್ಮೆಲ್ಲರ ಉದ್ದೇಶ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಜನರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ 2 ಕೋಟಿ ಸದಸ್ಯರನ್ನು ನೋಂದಣಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕು. ಜಿಲ್ಲೆಯಲ್ಲಿ ಗಟ್ಟಿಯಾದ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಬೇಕು. ಕಾರ್ಯಕರ್ತರಿಗೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ನಾರಾಯಣಸ್ವಾಮಿ ಮೊದಲಾದವರು ಆಗಮಿಸಲಿದ್ದಾರೆ ಎಂದರು.
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಆಗಿರುವ ಕೋಮು ಘರ್ಷಣೆ ಕುರಿತು ಕೇಳಿದ ಪ್ರಶ್ನೆಗೆ ನಾನು ಬುಧವಾರ ರಾತ್ರಿವರೆಗೂ ಮಂಡ್ಯದಲ್ಲಿದ್ದೆ. ಘಟನೆಯ ಬಗ್ಗೆ ನನಗೆ ಸಂಪೂರ್ಣ ಅರಿವಿಲ್ಲ. ನಾನು ಎಲ್ಲೋ ಕೂತು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ. ಮೆರವಣಿಗೆ ವೇಳೆ ಗಲಾಟೆ ಆಗಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗಬೇಕು. ನಮ್ಮ ರಾಜ್ಯಾಧ್ಯಕ್ಷರು ಅಲ್ಲಿಗೆ ಭೇಟಿ ನೀಡಲಿದ್ದಾರೆ. ನಾನೂ ಕೂಡ ಭೇಟಿ ಕೊಡುವೆ ಎಂದರು.
ಬೆಂಗಳೂರು ಬಿಜೆಪಿ ಕಚೇರಿ ಸ್ಫೋಟಿಸುವ ಸಂಚಿನ ಬಗ್ಗೆ ಪ್ರತಿಕ್ರಿಯಿಸಿ, ಈ ಪ್ರಕರಣವನ್ನು ಎನ್‌ಐಎ ತನಿಖೆ ಮಾಡುತ್ತಿದೆ. ಸರ್ಕಾರಕ್ಕೆ ಕಾನೂನು ಸುವ್ಯಸ್ಥೆಯ ಕನಿಷ್ಠ ಜ್ಞಾನ ಇರಬೇಕು. ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬುದು ನಮ್ಮ ಪಕ್ಷದ ಉದ್ದೇಶ ಎಂದು ಪ್ರೀತಂ ಹೇಳಿದರು.
ಪಕ್ಷ ನನಗೆ ಸಂಘಟನೆ ಜವಾಬ್ದಾರಿ ನೀಡಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುವೆ. ಅಭಿವೃದ್ಧಿ ರಾಜಕಾರಣದ ಬಗ್ಗೆ ಶಾಸಕರನ್ನು ಕೇಳಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಿಂದೆ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಸಾವಿರಾರು ಕೋಟಿ ರೂ. ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದೆವು. ಅಂತೆಯೇ ಈ ಸರ್ಕಾರವೂ ಜಿಲ್ಲೆಗೆ ಅನುದಾನ ಕೊಡಬೇಕು. ಅಭಿವೃದ್ಧಿಗೆ ಒತ್ತು ನೀಡಬೇಕು. ಗುಂಡಿ ಬಿದ್ದಿರುವ ರಸ್ತೆಗಳನ್ನು ಹಸನಾಗಿಸಬೇಕು. ನೀರಾವರಿ ಯೋಜನೆಗಳಿಗೆ ವೇಗ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರವನ್ನು ಒತ್ತಾಯಿಸಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ಸಕಲೇಶಪುರ ತಾಲೂಕಿನಲ್ಲಿ ಹಲವು ರೀತಿಯ ನಷ್ಟವಾಗಿದೆ. ಈ ನಡುವೆ ಅತಿವೃಷ್ಟಿಯೂ ದೊಡ್ಡ ಹಾನಿ ಮಾಡಿದೆ. ಹೀಗಾಗಿ ಕನಿಷ್ಠ 1000 ಕೋಟಿ ರೂ. ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮೊದಲು 500 ಕೋಟಿ ರೂ. ನೀಡಬೇಕು ಎಂದು ಕೋರಿದ್ದೇನೆ. ಡಿಸಿಎಂ ಅವರು ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಕೊಡದಿದ್ದರೆ ಹೋರಾಟ ಮುಂದುವರಿಯಲಿದೆ ಎಂದರು.
ಈ ವೇಳೆ ಶಾಸಕ ಎಚ್.ಕೆ.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ ನಾಗೇಂದ್ರ, ಮುಖಂಡರಾದ ನಾರಾಯಣಗೌಡ, ಅಮಿತ್ ಶೆಟ್ಟಿ, ಲಾರಿ ಚಂದ್ರು, ನೇತ್ರಾ ಮೊದಲಾದವರಿದ್ದರು.