ಜಿಲ್ಲೆ

ಜಿಲ್ಲೆಯಲ್ಲಿ 6 ಕಡೆ ‘ನಮ್ಮ ಕ್ಲಿನಿಕ್’

ಮಂಜುನಾಥ ಟಿ.ಭೋವಿ ಮೈಸೂರು

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ‘ನಮ್ಮ ಕ್ಲಿನಿಕ್’ ಚಿಕಿತ್ಸಾಲಯಗಳು ಶೀಘ್ರದಲ್ಲೇ ಜಿಲ್ಲೆಯಲ್ಲಿ ಶುರು ಆಗಲಿವೆ.


ಜಿಲ್ಲೆಯಲ್ಲಿ 6 ‘ನಮ್ಮ ಕ್ಲಿನಿಕ್’ ಆರಂಭಿಸಲು ತಯಾರಿ ಮಾಡಿಕೊಂಡಿದ್ದು, ನವೆಂಬರ್‌ನಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ‘ನಮ್ಮ ಕ್ಲಿನಿಕ್’ ಕಾರ್ಯನಿರ್ವಹಿಸಲಿದ್ದು, ಇದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.


ದೆಹಲಿ ಮಾದರಿ:

ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಆರಂಭಿಸಿರುವ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ರಾಜ್ಯದಲ್ಲೂ ನಮ್ಮ ಕ್ಲಿನಿಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022- 23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಆರ್ಥಿಕವಾಗಿ ದುರ್ಬಲರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲು ಆರೋಗ್ಯ ಇಲಾಖೆ ಯೋಜನೆಯನ್ನು ರೂಪಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಕ್ಲಿನಿಕ್ ಕಾರ್ಯಾರಂಭ ಮಾಡಿವೆ. ವರ್ಷಾಂತ್ಯದಲ್ಲಿ ರಾಜ್ಯಾದ್ಯಂತ ನಮ್ಮ ಕ್ಲಿನಿಕ್‌ಗಳು ಆರಂಭವಾಗುವ ನಿರೀಕ್ಷೆ ಇದೆ.

ಎಲ್ಲೆಲ್ಲಿ ‘ನಮ್ಮ ಕ್ಲಿನಿಕ್’?:

ಜಿಲ್ಲೆಗೆ ಮಂಜೂರಾಗಿರುವ ಆರು ನಮ್ಮ ಕ್ಲಿನಿಕ್‌ಗಳ ಪೈಕಿ ನಗರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ 3 ಮತ್ತು ಗ್ರಾಮೀಣ ಪ್ರದೇಶದಲ್ಲಿ 3 ತೆರೆಯಲಾಗುತ್ತಿದೆ. ನಗರ ವ್ಯಾಪ್ತಿಗೆ ಬರುವ ಹೂಟಗಳ್ಳಿಯಲ್ಲಿ 1, ಶ್ರೀರಾಂಪುರ, ದೇವಯ್ಯನಹುಂಡಿ, ಲಿಂಗಾಂಬುಧಿಪಾಳ್ಯಕ್ಕೆ ಸೇರಿದಂತೆ 1 ಹಾಗೂ ಭಾರತ್‌ನಗರ- ಹಂಚ್ಯಾ ನಡುವೆ 1 ಕ್ಲಿನಿಕ್ ಸ್ಥಾಪಿಸಲಾಗುತ್ತಿದೆ. ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಕೆ.ಆರ್.ನಗರ, ಎಚ್.ಡಿ.ಕೋಟೆ ಹಾಗೂ ತಿ.ನರಸೀಪುರ ತಾಲೂಕಿನಲ್ಲಿ ತಲಾ ಒಂದು ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದೆ. ವಿಕೇಂದ್ರೀಕೃತ ಸಮಗ್ರ ಆರೋಗ್ಯ ಸೇವೆ ಒದಗಿಸುವುದು ಈ ಕ್ಲಿನಿಕ್‌ಗಳ ಉದ್ದೇಶ. ಈ ಚಿಕಿತ್ಸಾಲಯಗಳಲ್ಲಿ ಉಪಶಮನ ಆರೈಕೆ, ದಂತ ಸೇವೆಗಳು, ಮಾನಸಿಕ ಆರೋಗ್ಯ ಸೇವೆಗಳು ಮತ್ತು ಇತರ ಎಲ್ಲ ಪ್ರಾಥಮಿಕ ಆರೋಗ್ಯ ಸೇವೆಯನ್ನು ನೀಡಲಾಗುತ್ತದೆ.

ಬಾಡಿಗೆ ಕಟ್ಟಡದಲ್ಲಿ ಕ್ಲಿನಿಕ್:
ಜಿಲ್ಲಾಧಿಕಾರಿ ಅನುಮತಿ ಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕ್ಲಿನಿಕ್‌ಗೆ ಬೇಕಾದ ವೈದ್ಯರು, ನರ್ಸ್ ಹಾಗೂ ಸಹಾಯಕರ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ. ಈಗಾಗಲೇ ಸ್ಥಳ ಗುರುತಿಸಲಾಗಿದ್ದು, ಕ್ಲಿನಿಕ್ ಆರಂಭಕ್ಕೆ ಬೇಕಾದ ಪೂರಕ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಆರಂಭಿಕ ಹಂತದಲ್ಲಿ ಬಾಡಿಗೆ ಕಟ್ಟಡದಲ್ಲಿ ಕ್ಲಿನಿಕ್ ಕಾರ್ಯಚಟುವಟಿಕೆ ನಡೆಸಲಿವೆ.

ಇದು ಪ್ರಾಥಮಿಕ ಕೇಂದ್ರಕ್ಕಿಂತ ಚಿಕ್ಕದು:
ಈಗಾಗಲೇ ಮೈಸೂರು ನಗರದಲ್ಲಿ 21 ಸೇರಿದಂತೆ ಜಿಲ್ಲೆಯಲ್ಲಿ 142 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 12 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಅವುಗಳೊಂದಿಗೆ ಈಗ ಹೊಸದಾಗಿ 6 ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಿಂದ ದೂರವಿರುವ ಜನರಿಗೆ ನಮ್ಮ ಕ್ಲಿನಿಕ್ ಆರೋಗ್ಯ ಸೇವೆ ನೀಡಲಿದೆ. ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಗಡಿ ಭಾಗದ ಜನರಿಗೆ ಸೂಕ್ತ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಅನುಕೂಲವಾಗಲಿದೆ. ಇದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಿಂತ ಚಿಕ್ಕದಾಗಿ ಇರಲಿದೆ.

ನಮ್ಮ ಕ್ಲಿನಿಕ್‌ನಲ್ಲಿ ಏನು ಸೇವೆ?:
ಜಿಲ್ಲಾ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಒತ್ತಡ ಕಡಿಮೆ ಮಾಡಲು ಹಾಗೂ ಸ್ಥಳೀಯವಾಗಿ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಇಲ್ಲಿ ಉಚಿತ ತಪಾಸಣೆ ಮತ್ತು ಔಷಧ ವಿತರಣೆ ಮಾಡಲಾಗುತ್ತದೆ.

12 ರೀತಿಯ ಆರೋಗ್ಯ ಸೇವೆಗಳು ಹಾಗೂ 14 ವಿಧದ ಪರೀಕ್ಷೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸೆಲಿಂಗ್ ಮೂಲಕ ಸೇವೆ ನೀಡುವ ವ್ಯವಸ್ಥೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ನಮ್ಮ ಕ್ಲಿನಿಕ್ ಆರಂಭಿಸಲು ಆರೋಗ್ಯ ಇಲಾಖೆ ಕೆಲವು ಮಾನದಂಡ ನಿಗದಿ ಮಾಡಿದೆ. ಕನಿಷ್ಠ 30 ಸಾವಿರ ಜನಸಂಖ್ಯೆ ಇರುವ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕ್ಲಿನಿಕ್ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ಇದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸಲಿದೆ. ಸಾಂಕ್ರಾಮಿಕವಲ್ಲದ ರೋಗ(ಎನ್‌ಸಿಡಿ)ಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಜಿಲ್ಲೆಗೆ 6 ‘ನಮ್ಮ ಕ್ಲಿನಿಕ್’ ಮಂಜೂರಾಗಿವೆ. ಮೈಸೂರು ನಗರ ಪ್ರದೇಶದ ಹೊರಭಾಗಕ್ಕೆ ಹೊಂದಿಕೊಂಡಂತೆ ಮೂರು ಕ್ಲಿನಿಕ್ ಸ್ಥಾಪಿಸಲಾಗುತ್ತಿದ್ದರೆ, ಉಳಿದ ಮೂರು ಕ್ಲಿನಿಕ್‌ಗಳನ್ನು ತಾಲೂಕು ಕೇಂದ್ರಗಳಲ್ಲಿ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ ಅನುಮೋದನೆ ನೀಡಿ ಕಾರ್ಯಾದೇಶವನ್ನೂ ನೀಡಲಾಗಿದೆ.ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ