ಮೈಸೂರು: ಜಿಲ್ಲೆಯಲ್ಲಿ 5.14 ಲಕ್ಷ ರಾಸುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ ಡಾ.ವೀರಭದ್ರಯ್ಯ ತಿಳಿಸಿದರು.
ನಗರದ ಧ್ವನಂತರಿ ರಸ್ತೆಯಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಾಲುಬಾಯಿ ರೋಗದ 3ನೇ ಹಂತದ ಲಸಿಕಾ ಅಭಿಯಾನ ನ.7ರಿಂದ ಒಂದು ತಿಂಗಳು ಕಾಲ ನಡೆಯಲಿದೆ. ಅದಕ್ಕಾಗಿ ಅಗತ್ಯವಿರುವ ಲಸಿಕೆ ದಾಸ್ತಾನು ಮಾಡಲಾಗಿದೆ. ತಾಲೂಕುವಾರು ಗ್ರಾಮೀಣ ಪ್ರದೇಶಕ್ಕೆ ತೆರಳಿ ಲಸಿಕೆ ಹಾಕಲು ಸಂಚಾರಿ ತಂಡವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ರೋಗದಿಂದ ಈಗಾಗಲೇ ಹಲವೆಡೆ ಜಾನುವಾರುಗಳು ತತ್ತರಿಸಿರುವುದು ವರದಿಯಾಗಿದೆ. ಇದರಿಂದ ರೈತರಿಗೂ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋಪಾಲಕರು ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.
ಕಾಲುಬಾಯಿ ರೋಗ ಎತ್ತು, ಹೋರಿ, ಹಸು, ಎಮ್ಮೆ ಹಾಗೂ ಹಂದಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅತಿಯಾದ ಜ್ವರ, ಬಾಯಲ್ಲಿ ಹುಣ್ಣು, ಜೊಲ್ಲು ಸುರಿಯುವುದು, ಕುಂಟುತ್ತ ನಡೆಯುವುದು, ಕೆಚ್ಚಲಿನ ಮೇಲೆ ಗುಳ್ಳೆಗಳಾಗುವುದು ರೋಗದ ಲಕ್ಷಣವಾಗಿದೆ. ರೋಗಗ್ರಸ್ತ ಪ್ರಾಣಿಗಳ ಸಂಪರ್ಕ, ವೈರಾಣುವಿನಿಂದ ಕಲುಷಿತಗೊಂಡಿರುವ ಮೇವು ಹಾಗೂ ನೀರು ಸೇವನೆಯಿಂದ, ಗಾಳಿ ಮೂಲಕ ಮತ್ತು ದನಗಳ ಜಾತ್ರೆ ಹಾಗೂ ಸಂತೆಗಳಿಂದ ಈ ರೋಗ ವ್ಯಾಪಕವಾಗಿ ಹರಡಲಿದೆ. ಈ ಬಗ್ಗೆ ರೈತರು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಈ ರೋಗಕ್ಕೆ ತುತ್ತಾದ ರಾಸುಗಳನ್ನು ಪ್ರತ್ಯೇಕವಾಗಿರಿಸಿ ಉಪಚರಿಸಬೇಕು. ಕಾಲು ಮತ್ತು ಬಾಯಲ್ಲಾಗಿರುವ ಹುಣ್ಣನ್ನು ಶೇ.0.5ರಷ್ಟು ಅಡುಗೆ ಸೋಡ ದ್ರಾವಣದಿಂದ ತೊಳೆಯಬೇಕು. ಮೃದು ಆಹಾರವಾದ ಗಂಜಿ, ಬಾಳೆಹಣ್ಣು, ರಾಗಿ ಗಂಜಿ ಕುಡಿಸಬೇಕು. ಆಂಟಿಬಯೋಟಿಕ್ಸ್ ಹಾಗೂ ವಿಟಿಮಿನ್ ಇಂಜೆಕ್ಷನ್ ಕೊಡಿಸಬೇಕು. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೊಟ್ಟಿಗೆಯನ್ನು ದಿನಕ್ಕೆ 3-4 ಬಾರಿಯಾದರೂ ಕ್ರಿಮಿನಾಶಕ ದ್ರಾವಣದಿಂದ ಬಳಸಿ ಶುದ್ಧೀಕರಿಸಬೇಕು ಎಂದು ತಿಳಿಸಿದರು.
ಈ ರೋಗದಿಂದ ಜಾನುವಾರುಗಳನ್ನು ಪಾರು ಮಾಡಲು ಕಡ್ಡಾಯವಾಗಿ ಲಸಿಕೆ ಪಡೆಯುವುದು ಒಂದೇ ಮಾರ್ಗವಾಗಿದೆ. ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಮತ್ತೊಮ್ಮೆ ಲಸಿಕೆ ಹಾಕಿಸಿ ಜಾನುವಾರುಗಳನ್ನು ರೋಗದಿಂದ ರಕ್ಷಿಸಿಕೊಳ್ಳಲು ಸಹಕರಿಸಬೇಕು. ಈ ಲಸಿಕೆ ಹಾಕಿಸುವುದಕ್ಕೆ ಹಾಗೂ ಮಾಹಿತಿಗಾಗಿ ಪಶುಪಾಲಕರ ಸಹಾಯವಾಣಿ ದೂ. ಸಂ. 82771 00200 ಸಂಪರ್ಕಿಸಬಹುದು ಎಂದರು.
ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿದೇಶಕ ಡಾ.ಷಡಕ್ಷರಮೂರ್ತಿ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಾಲರಾಜ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.